ವೀಸಾ ಅವಧಿ ಮುಗಿದರೂ ಭಾರತದಲ್ಲೇ ವಾಸ: ತಾಯಿ-ಮಗನ ಬಂಧನ
ದಾಸಗಾರೆಪಲ್ಲಿಯಲ್ಲಿ ಅಕ್ರಮ ವಾಸ ಪತ್ತೆ: ಬಾಗೇಪಲ್ಲಿ ಪೊಲೀಸರ ಕಾರ್ಯಾಚರಣೆ
ರಾಜ್ಯLATEST NEWSಅಪರಾಧ
S3 Media House
7/11/20261 min read


ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ದಾಸಗಾರೆಪಲ್ಲಿ ಗ್ರಾಮದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದಡಿ ಪಾಕಿಸ್ತಾನ ಮೂಲದ ಮಹಿಳೆ ಹಾಗೂ ಆಕೆಯ ಪುತ್ರನನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಪಾಕಿಸ್ತಾನ ಮೂಲದ ಫರ್ಹಾನಾಜ್ ಹಾಗೂ ಆಕೆಯ ಪುತ್ರ ಮೊಹಮ್ಮದ್ ಫರ್ದೀನ್ ಖಾನ್ ಎಂದು ಗುರುತಿಸಲಾಗಿದೆ. ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲೇ ಅಕ್ರಮವಾಗಿ ನೆಲೆಸಿದ್ದ ಆರೋಪದಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ದಾಸಗಾರೆಪಲ್ಲಿ ಗ್ರಾಮದ ನಿವಾಸಿ ಅಯೂಬ್ ಖಾನ್ ಅವರು ಫರ್ಹಾನಾಜ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರಲ್ಲಿ ಪುತ್ರ ಮೊಹಮ್ಮದ್ ಫರ್ದೀನ್ ಖಾನ್‌ನನ್ನೂ ಬಂಧಿಸಲಾಗಿದೆ. ಫರ್ಹಾನಾಜ್ ಹಾಗೂ ಅವರ ಪುತ್ರ ಪಾಕಿಸ್ತಾನದ ಪೌರತ್ವ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಭಾರತೀಯ ಪೌರತ್ವ ಹೊಂದಿರದಿದ್ದರೂ ಆರೋಪಿಗಳು ಅಕ್ರಮವಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ಹಲವು ದಾಖಲೆಗಳನ್ನು ಪಡೆದುಕೊಂಡಿರುವ ಶಂಕೆ ವ್ಯಕ್ತವಾಗಿದೆ. ಜೊತೆಗೆ ಬ್ಯಾಂಕ್ ಖಾತೆಗಳನ್ನೂ ಹೊಂದಿರುವ ಬಗ್ಗೆ ತನಿಖೆಯಲ್ಲಿ ಮಾಹಿತಿ ಲಭ್ಯವಾಗಿದ್ದು, ದಾಖಲೆಗಳ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಫರ್ಹಾನಾಜ್ ಅವರ ಪತಿ ಅಯೂಬ್ ಖಾನ್ ಪ್ರಸ್ತುತ ಕತಾರ್‌ನಲ್ಲಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಫರ್ಹಾನಾಜ್ ಮತ್ತು ಮಕ್ಕಳು ದಾಸಗಾರೆಪಲ್ಲಿ ಗ್ರಾಮದಲ್ಲೇ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ವೀಸಾ ಅವಧಿ ಮುಕ್ತಾಯಗೊಂಡ ಬಳಿಕವೂ ಪಾಕಿಸ್ತಾನಕ್ಕೆ ಮರಳದೇ ಭಾರತದಲ್ಲೇ ಉಳಿದಿದ್ದ ಹಿನ್ನೆಲೆಯಲ್ಲಿ ಅಕ್ರಮ ವಲಸಿಗರಾಗಿ ನೆಲೆಸಿರುವ ಕುರಿತು ದೂರು ದಾಖಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಬಾಗೇಪಲ್ಲಿ ಪೊಲೀಸರು ತಾಯಿ ಮತ್ತು ಪುತ್ರನನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


