ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಬಹುಮಾನ
ಚಿನ್ನದ ಪದಕ ವಿಜೇತರಿಗೆ ₹1 ಕೋಟಿ; ಬೆಳ್ಳಿ ಪದಕ ವಿಜೇತರಿಗೆ ₹75 ಲಕ್ಷ, ಕಂಚಿಗೆ ₹50 ಲಕ್ಷ
LATEST NEWSದೇಶಬೆಂಗಳೂರುಕ್ರೀಡೆ
S3 Media House
10/6/20261 min read


ಬೆಂಗಳೂರು: ಏಷ್ಯನ್ ಗೇಮ್ಸ್-2026ರಲ್ಲಿ ಪದಕ ಗೆದ್ದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ನಗದು ಬಹುಮಾನ ಘೋಷಿಸಲಾಗಿದೆ. ಪದಕ ವಿಜೇತ ಕ್ರೀಡಾಪಟುಗಳನ್ನು ಮುಖ್ಯಮಂತ್ರಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಲಿದ್ದಾರೆ.
ಏಷ್ಯನ್ ಗೇಮ್ಸ್-2026ರಲ್ಲಿ ಭಾಗವಹಿಸಿ ಸ್ಪರ್ಧಿಸಿದ ಕರ್ನಾಟಕದ 20 ಕ್ರೀಡಾಪಟುಗಳಿಗೆ ಇದೇ ಮೊದಲ ಬಾರಿಗೆ ತಲಾ ₹5 ಲಕ್ಷ ಪ್ರೋತ್ಸಾಹಧನ ನೀಡಲು ಸರ್ಕಾರ ನಿರ್ಧರಿಸಿದೆ.
ಈ ಹಿಂದೆ ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನೀಡಲಾಗುತ್ತಿದ್ದ ನಗದು ಬಹುಮಾನವನ್ನು ಸಹ ಸರ್ಕಾರ ಪರಿಷ್ಕರಿಸಿದೆ. ಚಿನ್ನದ ಪದಕ ವಿಜೇತರಿಗೆ ಈ ಹಿಂದೆ ₹35 ಲಕ್ಷ ನೀಡಲಾಗುತ್ತಿದ್ದು, ಇದೀಗ ₹1 ಕೋಟಿಗೆ ಹೆಚ್ಚಿಸಲಾಗಿದೆ. ಬೆಳ್ಳಿ ಪದಕ ವಿಜೇತರಿಗೆ ₹25 ಲಕ್ಷದಿಂದ ₹75 ಲಕ್ಷಕ್ಕೆ, ಕಂಚಿನ ಪದಕ ವಿಜೇತರಿಗೆ ₹15 ಲಕ್ಷದಿಂದ ₹50 ಲಕ್ಷಕ್ಕೆ ಬಹುಮಾನ ಹೆಚ್ಚಿಸಲಾಗಿದೆ.
ಪರಿಷ್ಕೃತ ಬಹುಮಾನ ಮೊತ್ತದ ಪ್ರಕಾರ, ಮಹಿಳಾ ಕ್ರಿಕೆಟ್ ತಂಡದ ಸದಸ್ಯೆ ಶ್ರೇಯಾಂಕಾ ಆರ್. ಪಾಟೀಲ್ ಅವರಿಗೆ ಚಿನ್ನದ ಪದಕಕ್ಕಾಗಿ ₹1 ಕೋಟಿ, ಎಂ.ಆರ್. ಪೂವಮ್ಮ ಅವರಿಗೆ ಬೆಳ್ಳಿ ಮತ್ತು ಚಿನ್ನದ ಪದಕಕ್ಕಾಗಿ ಒಟ್ಟು ₹1.75 ಕೋಟಿ, ತಿಲೋತ್ತಮ ಸೇನ್ ಅವರಿಗೆ ಬೆಳ್ಳಿ ಪದಕಕ್ಕಾಗಿ ₹75 ಲಕ್ಷ ಸೇರಿದಂತೆ ಪದಕ ವಿಜೇತರಿಗೆ ವಿವಿಧ ಮೊತ್ತದ ನಗದು ಬಹುಮಾನ ನೀಡಲಾಗುವುದು.
ಇದಲ್ಲದೆ, ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿ ಪದಕ ಗೆದ್ದಿರುವ ಎಂಟು ಕ್ರೀಡಾಪಟುಗಳಿಗೆ ಪದಕ ಸಾಧನೆಯ ಬಹುಮಾನದ ಜೊತೆಗೆ ತಲಾ ₹5 ಲಕ್ಷ ಹೆಚ್ಚುವರಿ ಪ್ರೋತ್ಸಾಹಧನ ನೀಡಲು ಸರ್ಕಾರ ನಿರ್ಧರಿಸಿದೆ.
ಗುಂಪು-ಬಿ ಹುದ್ದೆಗಳಿಗೆ ನೇರ ನೇಮಕ
ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ಗುಂಪು-ಬಿ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತ ಕ್ರೀಡಾಪಟುಗಳನ್ನು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ನೇರವಾಗಿ ನೇಮಕ ಮಾಡಲಾಗುವುದು.
ಒಲಿಂಪಿಕ್ಸ್ ಸಿದ್ಧತೆಗೆ ತಲಾ ₹10 ಲಕ್ಷ
ಏಷ್ಯನ್ ಗೇಮ್ಸ್ ಪದಕ ವಿಜೇತರಾದ ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್., ಶ್ರೇಯಾಂಕಾ ಪಾಟೀಲ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತೆ ಶಿಲ್ಪಾ ಕೆ.ಎಸ್. ಅವರನ್ನು 2026-27ನೇ ಸಾಲಿನ ಗುರಿ ಒಲಿಂಪಿಕ್ಸ್ ಯೋಜನೆಗೆ ಸೇರ್ಪಡೆ ಮಾಡಲಾಗಿದೆ. ಒಲಿಂಪಿಕ್ಸ್ ಸಿದ್ಧತೆಗಾಗಿ ಈ ಕ್ರೀಡಾಪಟುಗಳಿಗೆ ಪ್ರಸಕ್ತ ಸಾಲಿನಲ್ಲಿ ತಲಾ ₹10 ಲಕ್ಷ ನಗದು ಪ್ರೋತ್ಸಾಹಧನ ನೀಡಲಾಗುವುದು.
ಸರ್ಕಾರಿ ನೇರ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ.2 ಮೀಸಲಾತಿ
ಸಾಧಕ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ನೇರ ನೇಮಕಾತಿಯಲ್ಲಿ ಶೇ.2 ಮೀಸಲಾತಿ ಜಾರಿಗೊಳಿಸಲಾಗಿದೆ. 2026ರ ಅಕ್ಟೋಬರ್ 3ರಂದು ಈ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು, ಗುಂಪು-ಎ, ಗುಂಪು-ಬಿ, ಗುಂಪು-ಸಿ ಮತ್ತು ಗುಂಪು-ಡಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಮೀಸಲಾತಿ ಅನ್ವಯವಾಗಲಿದೆ.ಬೆಂಗಳೂರು: ಏಷ್ಯನ್ ಗೇಮ್ಸ್-2026ರಲ್ಲಿ ಪದಕ ಗೆದ್ದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ನಗದು ಬಹುಮಾನ ಘೋಷಿಸಲಾಗಿದೆ. ಪದಕ ವಿಜೇತ ಕ್ರೀಡಾಪಟುಗಳನ್ನು ಮುಖ್ಯಮಂತ್ರಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಲಿದ್ದಾರೆ.


