ಎಟಿಎಂ ವಾಹನ ತಡೆದು ಕಿರಿಕ್: ₹1.79 ಕೋಟಿ ನಗದು ದೋಚಲು ಯತ್ನದ ಶಂಕೆ

ಬನ್ನೇರುಘಟ್ಟ–ಜಿಗಣಿ ರಸ್ತೆಯಲ್ಲಿ ಘಟನೆ; ವಾಹನದ ಕೀ ಕಸಿದು ಪರಾರಿಯಾದ ಕಿಡಿಗೇಡಿಗಳು

LATEST NEWSಬೆಂಗಳೂರುಅಪರಾಧ

S3 Media House

7/10/20261 min read

ಬೆಂಗಳೂರು: ನಗರದ ಹೊರವಲಯದ ಬನ್ನೇರುಘಟ್ಟ–ಜಿಗಣಿ ಮುಖ್ಯರಸ್ತೆಯಲ್ಲಿ ಎಟಿಎಂಗಳಿಗೆ ಹಣ ತುಂಬಲು ತೆರಳುತ್ತಿದ್ದ ವಾಹನವನ್ನು ಕಿಡಿಗೇಡಿಗಳು ನಡುರಸ್ತೆಯಲ್ಲೇ ಅಡ್ಡಗಟ್ಟಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಘಟನೆಯ ವೇಳೆ ವಾಹನದಲ್ಲಿ ₹1 ಕೋಟಿ 79 ಲಕ್ಷ ನಗದು ಇದ್ದದ್ದು ಆತಂಕಕ್ಕೆ ಕಾರಣವಾಗಿದೆ.

ಮಾಹಿತಿಯ ಪ್ರಕಾರ, ಎಟಿಎಂ ವಾಹನದಲ್ಲಿ ಗನ್‌ಮ್ಯಾನ್, ಚಾಲಕ ಹಾಗೂ ಮತ್ತೋರ್ವ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಬನ್ನೇರುಘಟ್ಟ–ಜಿಗಣಿ ರಸ್ತೆಯಲ್ಲಿ ವಾಹನ ಯೂ-ಟರ್ನ್ ಪಡೆಯುತ್ತಿದ್ದ ವೇಳೆ ಕೆಲ ಯುವಕರು ತಮ್ಮ ಬೈಕ್‌ಗೆ ವಾಹನ ತಗುಲಿದೆ ಎಂದು ಆರೋಪಿಸಿ ವಾಹನವನ್ನು ತಡೆದು ಗಲಾಟೆ ಆರಂಭಿಸಿದ್ದಾರೆ ಎನ್ನಲಾಗಿದೆ.

ಆರೋಪಿಗಳು ವಾಹನವನ್ನು ನಡುರಸ್ತೆಯಲ್ಲೇ ನಿಲ್ಲಿಸಿ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಲು ಆರಂಭಿಸುತ್ತಿದ್ದಂತೆ ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಪರಾರಿಯಾಗುವ ಮುನ್ನ ಎಟಿಎಂ ವಾಹನದ ಕೀಲಿಯನ್ನು ಕಸಿದುಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.

ಘಟನೆಯ ಹಿಂದೆ ವಾಹನದಲ್ಲಿದ್ದ ಭಾರೀ ಪ್ರಮಾಣದ ಹಣ ದೋಚುವ ಉದ್ದೇಶವಿತ್ತೇ ಎಂಬ ಅನುಮಾನ ವ್ಯಕ್ತವಾಗಿದ್ದು, ಆರೋಪಿಗಳು ಪೂರ್ವಯೋಜಿತವಾಗಿ ದುಷ್ಕೃತ್ಯ ಎಸಗಲು ಹೊಂಚು ಹಾಕಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಘಟನೆ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.