ನಾಲ್ಕು ಕಿ.ಮೀ ಚೇಸ್ ಮಾಡಿ ಲಾರಿ ಡ್ರೈವರ್ ತಲೆಗೆ ಒಡೆದಿದ್ದೇಕೆ ಪುಂಡರು?
ನಾಲ್ಕು ಕಿ.ಮೀ. ಚೇಸ್ ಮಾಡಿ ನೀರಿನ ಟ್ಯಾಂಕರ್ ಚಾಲಕನ ಮೇಲೆ ಹಲ್ಲೆ: ಕಲ್ಲು ತೂರಿ ಗಾಜು ಒಡೆದು ತಲೆಗೆ ಗಂಭೀರ ಗಾಯ!
LATEST NEWSಬೆಂಗಳೂರುಅಪರಾಧ
S3 Media House
7/24/20261 min read


ಬೆಂಗಳೂರು: ನಾಲ್ಕು ಕಿಲೋಮೀಟರ್‌ಗೂ ಹೆಚ್ಚು ದೂರ ನೀರಿನ ಟ್ಯಾಂಕರ್ ಅನ್ನು ಬೆನ್ನಟ್ಟಿದ ದುಷ್ಕರ್ಮಿಗಳ ಗುಂಪು, ಟ್ಯಾಂಕರ್‌ನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಬೇಗೂರು ಸಮೀಪ ನಡೆದಿದೆ. ಕಲ್ಲು ತೂರಿ ಟ್ಯಾಂಕರ್‌ನ ಮುಂಭಾಗದ ಗಾಜು ಒಡೆದು, ಚಾಲಕನ ತಲೆಗೆ ಗಂಭೀರ ಗಾಯಪಡಿಸಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.
ಮಾಹಿತಿಯ ಪ್ರಕಾರ, ಪರಪ್ಪನ ಅಗ್ರಹಾರ ಸಮೀಪದ ಪ್ರದೇಶಕ್ಕೆ ನೀರು ಪೂರೈಸಲು ಬಂದಿದ್ದ ಖಾಸಗಿ ನೀರಿನ ಟ್ಯಾಂಕರ್, ನೀರನ್ನು ಡಂಪ್ ಮಾಡಿ ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿದೆ. ಈ ವೇಳೆ ಸ್ಥಳೀಯ ನಿವಾಸಿಯೊಬ್ಬರು ಮನೆ ಮುಂದೆ ರಸ್ತೆಯಲ್ಲಿ ಹಾಕಿದ್ದ ಹಲಗೆಯ ಮೇಲೆ ಟ್ಯಾಂಕರ್ ಹರಿದಿದೆ ಎಂದು ಆರೋಪಿಸಿ ಚಾಲಕನೊಂದಿಗೆ ವಾಗ್ವಾದ ಆರಂಭಿಸಿದ್ದಾರೆ.
ವಾದ ವಿವಾದ ತೀವ್ರಗೊಂಡ ಬಳಿಕ ಕೆಲ ಯುವಕರು ಮೂರು-ನಾಲ್ಕು ಬೈಕ್‌ಗಳಲ್ಲಿ ಟ್ಯಾಂಕರ್‌ನ್ನು ಬೆನ್ನಟ್ಟಿದ್ದಾರೆ. ಪರಪ್ಪನ ಅಗ್ರಹಾರದಿಂದ ಬೇಗೂರುವರೆಗೆ ಸುಮಾರು ನಾಲ್ಕು ಕಿಲೋಮೀಟರ್‌ಗೂ ಹೆಚ್ಚು ದೂರ ಟ್ಯಾಂಕರ್ ಅನ್ನು ಚೇಸ್ ಮಾಡಿದ ಅವರು, ಬಳಿಕ ವಾಹನವನ್ನು ಅಡ್ಡಗಟ್ಟಿ ಕಲ್ಲು ತೂರಿ ಮುಂಭಾಗದ ಗಾಜು ಒಡೆದಿದ್ದಾರೆ.
ಗಾಜು ಒಡೆದ ಬಳಿಕ ಟ್ಯಾಂಕರ್ ಚಾಲಕ ಅಸ್ಲಿನ್ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಕಲ್ಲಿನ ಹೊಡೆತದಿಂದ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಬುರುಡೆ ಒಡೆದಿರುವುದಾಗಿ ತಿಳಿದುಬಂದಿದೆ. ಗಾಯಾಳು ಚಾಲಕನನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಘಟನೆಯ ಸಂಪೂರ್ಣ ದೃಶ್ಯ ಸ್ಥಳದಲ್ಲಿದ್ದ ಕೆಲವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಬೈಕ್‌ಗಳಲ್ಲಿ ಬಂದ ಯುವಕರು ಟ್ಯಾಂಕರ್‌ನ್ನು ಅಡ್ಡಗಟ್ಟಿ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿವೆ.
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೊಬೈಲ್ ವಿಡಿಯೋ ಹಾಗೂ ಇತರ ಸಾಕ್ಷ್ಯಗಳ ಆಧಾರದ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯ ನಡೆಸುತ್ತಿದ್ದಾರೆ. ಸಣ್ಣ ವಿಚಾರಕ್ಕೆ ಕಾನೂನು ಕೈಗೆತ್ತಿಕೊಂಡು ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.


