ಕೆ.ಆರ್. ಪುರಂ ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ಒಳಜಗಳ
ಭೈರತಿ ಬಸವರಾಜ್–ನಂದೀಶ್ ರೆಡ್ಡಿ ನಡುವೆ ಮತ್ತೆ ಕೋಲ್ಡ್ ವಾರ್; ಅಶೋಕ್‌ಗೆ ದೂರು ನೀಡಿದ ಕಾರ್ಯಕರ್ತರು
ರಾಜಕೀಯLATEST NEWSಬೆಂಗಳೂರು
S3 Media House
7/10/20261 min read


ಬೆಂಗಳೂರು: ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯೊಳಗಿನ ಭಿನ್ನಾಭಿಪ್ರಾಯಗಳು ಮತ್ತೊಮ್ಮೆ ಬಹಿರಂಗವಾಗಿದ್ದು, ಪಕ್ಷದ ರಾಜ್ಯ ಉಪಾಧ್ಯಕ್ಷ ಹಾಗೂ ಕ್ಷೇತ್ರದ ಶಾಸಕ ಬೈರತಿ ಬಸವರಾಜು ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ನಡುವಿನ ಕೋಲ್ಡ್ ವಾರ್ ಮತ್ತೆ ಮುನ್ನೆಲೆಗೆ ಬಂದಿದೆ.
ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದ ಮೂವರು ಮಾಜಿ ಬಿಬಿಎಂಪಿ ಕಾರ್ಪೋರೇಟರ್‌ಗಳನ್ನು ಮತ್ತೆ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಭೈರತಿ ಬಸವರಾಜ್ ಅವರ ಗಮನಕ್ಕೆ ತರದೇ ಕ್ರಮ ಕೈಗೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ಭೈರತಿ ಬಸವರಾಜ್ ಬೆಂಬಲಿಗರು ನಂದೀಶ್ ರೆಡ್ಡಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
ಇದರಿಂದ ಅಸಮಾಧಾನಗೊಂಡ ಕೆ.ಆರ್. ಪುರಂ ಕ್ಷೇತ್ರದ 200ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಿಧಾನಸಭೆಯ ವಿರೋಧ ಪಕ್ಷದ ನಾಯಕ R. Ashoka ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ.
ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಅಶೋಕ್ ಅವರ ಖಾಸಗಿ ನಿವಾಸಕ್ಕೆ ತೆರಳಿದ ಕಾರ್ಯಕರ್ತರು, ಕ್ಷೇತ್ರದ ನಾಯಕರೊಂದಿಗೆ ಸಮಾಲೋಚನೆ ನಡೆಸದೇ ಸೇರ್ಪಡೆ ಪ್ರಕ್ರಿಯೆ ನಡೆಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕೆ.ಆರ್. ಪುರಂನಲ್ಲಿ ನಡೆದ ಖಾಸಗಿ ಮದುವೆ ಸಮಾರಂಭದ ವೇಳೆ ಮೂವರು ಮಾಜಿ ಬಿಬಿಎಂಪಿ ಕಾರ್ಪೋರೇಟರ್‌ಗಳಿಗೆ ಬಿಜೆಪಿ ಶಾಲು ಹೊದಿಸಿ ಪಕ್ಷಕ್ಕೆ ಸ್ವಾಗತ ಕೋರಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆರ್. ಅಶೋಕ್ ಉಪಸ್ಥಿತರಿದ್ದು, ಸೇರ್ಪಡೆ ಪ್ರಕ್ರಿಯೆಗೆ ಸಾಕ್ಷಿಯಾಗಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಆರ್. ಅಶೋಕ್, ಆ ಸಂದರ್ಭದಲ್ಲಿ ಸೇರ್ಪಡೆಗೊಂಡವರು ಯಾರು ಎಂಬ ಮಾಹಿತಿ ತನಗೆ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. ಸಂಬಂಧಿತ ನಾಯಕರೊಂದಿಗೆ ಚರ್ಚಿಸದೇ ಸೇರ್ಪಡೆ ನಡೆದಿದ್ದರೆ ಅದು ಸರಿಯಾದ ಕ್ರಮವಲ್ಲ ಎಂದೂ ಅವರು ಅಭಿಪ್ರಾಯಪಟ್ಟರು.
ಅಲ್ಲದೆ, ಭೈರತಿ ಬಸವರಾಜ್ ಅವರು ಕೆ.ಆರ್. ಪುರಂ ಕ್ಷೇತ್ರದಲ್ಲಿ ಪಕ್ಷದ ಪ್ರಮುಖ ನಾಯಕರಾಗಿದ್ದು, ಅವರ ನೇತೃತ್ವದಲ್ಲಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಭೈರತಿ ಬಸವರಾಜ್ ಬೆಂಬಲಿಗರ ಅಸಮಾಧಾನವನ್ನು ಅಶೋಕ್ ಸಮಾಧಾನಪಡಿಸಲು ಮುಂದಾಗಿದ್ದು, ಪಕ್ಷದ ಒಳಜಗಳವನ್ನು ಶಮನಗೊಳಿಸುವ ಪ್ರಯತ್ನ ನಡೆಸಿದರು.


