ನಿಲ್ಲದ ನಿವೇಶನದಾರರ ಸಮಸ್ಯೆ: ಪರಿಹಾರಕ್ಕಾಗಿ 5 ಸಾವಿರಕ್ಕೂ ಹೆಚ್ಚು ಕುಟುಂಬಗಳ ಹೋರಾಟಕ್ಕೆ ಸಿದ್ಧತೆ!
ಸಮಸ್ಯೆಯ ಸುಳಿಯಲ್ಲಿ ರಿವ್ಯೂನ್ಯೂ ಸೈಟ್ ಮಾಲೀಕರು – BDA ವಿರುದ್ಧ ನಿವೇಶನದಾರರ ಆಕ್ರೋಶ
ಸಾರ್ವಜನಿಕ ಸಮಸ್ಯೆಗಳುLATEST NEWSಬೆಂಗಳೂರು
S3 Media House
10/2/20261 min read


ಯಲಹಂಕ: ಶಿವರಾಮ ಕಾರಂತ ಬಡಾವಣೆಯ ನಿವೇಶನದಾರರ ಸಮಸ್ಯೆಗಳು ವರ್ಷಗಳಿಂದ ಮುಂದುವರಿದಿದ್ದು, ಇದೀಗ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಸುಮಾರು 5,000ಕ್ಕೂ ಹೆಚ್ಚು ನಿವೇಶನದಾರರು ಹೋರಾಟಕ್ಕೆ ಸಜ್ಜಾಗಿದ್ದಾರೆ ಎಂದು ನಿವೇಶನದಾರರ ಪರ ಹೋರಾಟಗಾರರು ತಿಳಿಸಿದ್ದಾರೆ.
ಶಿವರಾಮ ಕಾರಂತ ಬಡಾವಣೆಯ ವ್ಯಾಪ್ತಿಯ 17 ಹಳ್ಳಿಗಳಲ್ಲಿ ನಿವೇಶನ ಪಡೆದಿರುವವರು ಭೂಮಿ, ಪರಿಹಾರ, ನಿವೇಶನದ ಮೌಲ್ಯ ಹಾಗೂ BDA ನಿಗದಿಪಡಿಸಿರುವ ದರಗಳ ಕುರಿತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಹಲವು ವರ್ಷಗಳಿಂದ ಭೂ ಮಾಲೀಕರು ಹಾಗೂ BDA ಅಧಿಕಾರಿಗಳ ನಡುವೆ ನಡೆಯುತ್ತಿರುವ ವಿವಾದದ ಪರಿಣಾಮ ನಿವೇಶನದಾರರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ ಎಂಬುದು ಅವರ ಆರೋಪ.
“ಸರ್ಕಾರಕ್ಕೆ ಭೂಮಿ ಕೊಟ್ಟು ನಾವೇ ಭಿಕ್ಷೆ ಬೇಡುವ ಪರಿಸ್ಥಿತಿ”
ಬಡಾವಣೆಯ ಯೋಜನೆಗಾಗಿ ಭೂಮಿ ನೀಡಿದ ಬಳಿಕವೂ ತಮ್ಮ ಹಕ್ಕು ಮತ್ತು ನಿವೇಶನದ ವಿಚಾರದಲ್ಲಿ ಸ್ಪಷ್ಟತೆ ಸಿಗುತ್ತಿಲ್ಲ. “ಸರ್ಕಾರಕ್ಕೆ ಭೂಮಿ ಕೊಟ್ಟು ನಾವೇ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಕೆಲ ನಿವೇಶನದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
BDA ಕಚೇರಿಗೆ ತೆರಳಿದರೂ ತಮ್ಮ ಸಮಸ್ಯೆಗಳಿಗೆ ಸಮರ್ಪಕ ಸ್ಪಂದನೆ ದೊರೆಯುತ್ತಿಲ್ಲ ಎಂಬುದು ನಿವೇಶನದಾರರ ಮತ್ತೊಂದು ಆರೋಪ. ಸಮಸ್ಯೆ ಕುರಿತು ಅಧಿಕಾರಿಗಳು ಸ್ಪಷ್ಟವಾದ ಮಾಹಿತಿ ನೀಡಿ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ದರ ನಿಗದಿ ಕುರಿತು ಆಕ್ರೋಶ
ನಿವೇಶನ ಕಳೆದುಕೊಂಡವರಿಗೆ ಕೇವಲ ₹200ರಷ್ಟು ರಿಯಾಯಿತಿ ನೀಡಲಾಗಿದೆ ಎಂದು ನಿವೇಶನದಾರರು ಆರೋಪಿಸಿದ್ದು, ಮತ್ತೊಂದೆಡೆ ನಿವೇಶನದಾರರ ಕಡೆಯಿಂದ ಪ್ರತಿ ಚದರ ಅಡಿಗೆ ₹6,000 ನಿಗದಿಪಡಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಈ ದರ ನಿಗದಿ ಯಾವ ಆಧಾರದ ಮೇಲೆ ಮಾಡಲಾಗಿದೆ ಎಂಬುದನ್ನು BDA ಸ್ಪಷ್ಟಪಡಿಸಬೇಕು. ಸಾರ್ವಜನಿಕರ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ನ್ಯಾಯಸಮ್ಮತ ದರ ನಿಗದಿ ಮಾಡಬೇಕು ಎಂದು ನಿವೇಶನದಾರರು ಆಗ್ರಹಿಸಿದ್ದಾರೆ.
“ವರ್ಷಗಳ ಸಮಸ್ಯೆಗೆ ಇನ್ನಾದರೂ ಪರಿಹಾರ ನೀಡಿ”
ಈಗಾಗಲೇ ನಿವೇಶನ ಕಳೆದುಕೊಂಡು ಅನೇಕ ಕುಟುಂಬಗಳು ಸಂಕಷ್ಟದಲ್ಲಿದ್ದು, ಮತ್ತೊಂದೆಡೆ ನಿವೇಶನದ ಹಕ್ಕು ಮತ್ತು ದರ ನಿಗದಿ ವಿಚಾರದಲ್ಲೂ ಗೊಂದಲ ಮುಂದುವರಿದಿದೆ ಎಂದು ನಿವಾಸಿಗಳು ಹೇಳಿದ್ದಾರೆ. ಶಿವರಾಮ ಕಾರಂತ ಬಡಾವಣೆಯ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, BDA ಅಧಿಕಾರಿಗಳು ಹಾಗೂ ಭೂ ಮಾಲೀಕರ ನಡುವಿನ ವಿವಾದಗಳಿಗೆ ಪರಿಹಾರ ಕಂಡುಕೊಂಡು, ನಿವೇಶನದಾರರಿಗೆ ನ್ಯಾಯ ಒದಗಿಸಬೇಕು ಎಂಬುದು ನಿವೇಶನದಾರರ ಒಕ್ಕೊರಲ ಆಗ್ರಹವಾಗಿದೆ. 5,000ಕ್ಕೂ ಹೆಚ್ಚು ನಿವೇಶನದಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಯಾವಾಗ? ಎಂಬ ಪ್ರಶ್ನೆ ಇದೀಗ ಯಲಹಂಕದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.


