ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಗೊಂದಲ; ಪ್ರಶ್ನೆ ಪತ್ರಿಕೆ ತಡವಾಗಿ ವಿತರಣೆ ಆರೋಪ
ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಶಾರದಾಂಬಾ ಪಿಯು ಕಾಲೇಜಿನಲ್ಲಿ ನಡೆದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪ್ರವೇಶ ಪರೀಕ್ಷೆ
LATEST NEWSರಾಜ್ಯ
S3 Media House
8/2/20261 min read


ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಶಾರದಾಂಬಾ ಪಿಯು ಕಾಲೇಜಿನಲ್ಲಿ ನಡೆದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪ್ರವೇಶ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ವಿತರಣೆಯಲ್ಲಿ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ನಡೆದಿದೆ.
ತಿಕೋಟಾದ ಕೋಟ್ಯಾಳ್ ರಸ್ತೆಯಲ್ಲಿರುವ ಶಾರದಾಂಬಾ ಪಿಯು ಕಾಲೇಜಿನಲ್ಲಿ ಬೆಳಿಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಯನ್ನು ಸುಮಾರು ಅರ್ಧ ಗಂಟೆ ತಡವಾಗಿ, ಬೆಳಿಗ್ಗೆ 11 ಗಂಟೆ ಸುಮಾರಿಗೆ ವಿತರಿಸಲಾಗಿದೆ ಎಂದು ಅಭ್ಯರ್ಥಿಗಳು ಆರೋಪಿಸಿದರು.
ಇದರ ಮಧ್ಯೆ, ಪರೀಕ್ಷೆ ಆರಂಭಕ್ಕೂ ಮುನ್ನ ಒಬ್ಬ ಪೊಲೀಸ್ ಪೇದೆ ಪ್ರಶ್ನೆ ಪತ್ರಿಕೆಯನ್ನು ಪರೀಕ್ಷಾ ಕೇಂದ್ರದಿಂದ ಹೊರಗೆ ತೆಗೆದುಕೊಂಡು ಹೋಗಿರುವುದಾಗಿ ಕೆಲ ಅಭ್ಯರ್ಥಿಗಳು ಆರೋಪಿಸಿ ಆಕ್ಷೇಪ ವ್ಯಕ್ತಪಡಿಸಿದರು. ಈ ಬೆಳವಣಿಗೆಯಿಂದ ಪರೀಕ್ಷಾ ಕೇಂದ್ರದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಅಭ್ಯರ್ಥಿಗಳು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಲಕ್ಷ್ಮಣ ನಿಂಬರಗಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಅಭ್ಯರ್ಥಿಗಳ ಅಹವಾಲುಗಳನ್ನು ಆಲಿಸಿದ ಅವರು, ಘಟನೆ ಕುರಿತು ಮಾಹಿತಿ ಸಂಗ್ರಹಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರಶ್ನೆ ಪತ್ರಿಕೆ ವಿತರಣೆಯಲ್ಲಿ ವಿಳಂಬ ಹಾಗೂ ಅಭ್ಯರ್ಥಿಗಳು ಮಾಡಿರುವ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.


