ಬೂದಿಗೆರೆ ರಸ್ತೆಯಲ್ಲಿ ನಡೆದ ರಾಬರಿ ಪ್ರಕರಣಕ್ಕೆ ಬೆಚ್ಚಿದ ಜನತೆ!
ದೇವನಹಳ್ಳಿ ಪೊಲೀಸರು ರಾತ್ರಿ ಪಾಳಿಯಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಸಾರ್ವಜನಿಕರ ಆಕ್ರೋಶ!
LATEST NEWSಬೆಂಗಳೂರು ಗ್ರಾಮಾಂತರಅಪರಾಧ
S3 Media House
8/26/20261 min read


ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ ರಸ್ತೆಯಲ್ಲಿ ನೆನ್ನೆ ತಡರಾತ್ರಿ ನಡೆದಿರುವ ಭೀಕರ ರಾಬರಿಗೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ದೇವನಹಳ್ಳಿ - ಬೂದಿಗೆರೆ ರಸ್ತೆಯ ಬ್ರಿಗೆಡ್ ಮುಂದೆ ಘಟನೆ ನಡೆದಿದ್ದು, ಕಳ್ಳರ ಮಾಡಿದ ಭೀಕರತೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಂದಹಾಗೆ ನೆನ್ನೆ ತಡರಾತ್ರಿ 1 ಗಂಟೆ ಸುಮಾರಿಗೆ ಬ್ರಿಗೆಡ್ ಮುಂಭಾಗದ ರಸ್ತೆಯಲ್ಲಿ ಹೊಂಚು ಹಾಕಿದ್ದ ಇಬ್ಬರು ಕಳ್ಳರು ರಾಯಸಂದ್ರ ಕಡೆಯಿಂದ ಬಂದಂತಹ ಬೈಕ್ ಗೆ ಅಡ್ಡ ಹಾಕಿದ್ದಾರೆ. ಇದನ್ನು ಗಮನಿಸಿದ ದ್ವಿಚಕ್ರ ಸವಾರರು ವಾಹನದ ವೇಗ ಹೆಚ್ಚಿಸಿದ್ದಾರೆ. ಆದರೂ ಬಿಡದ ಖತರ್ನಾಕ್ ಗಳು ಬೈಕ್ ಅಡ್ಡ ಬಂದು ಬೈಕ್ ನ್ನು ಕೆಡವಿದ್ದಾರೆ. ಈ ವೇಳೆ ಓರ್ವ ಕಳ್ಳನಿಗೆ ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದಿದ್ದಾನೆ. ಜೊತೆಗೆ ಸವಾರರು ಇಬ್ಬರು ಸಹ ರಸ್ತೆಗೆ ಬಿದ್ದಿದ್ದಾರೆ.
ಇಷ್ಟಾದರೂ ಬಿಡದ ಕಳ್ಳರು ಬೈಕ್ ಸವಾರರ ಬಳಿ ದೋಚಲು ಮುಂದಾಗಿದ್ದಾನೆ. ಸವಾರರ ಬಳಿಯಿದ್ದ ಮೊಬೈಲ್ ಮತ್ತು ಹಣ ಪೀಕುವ ಯತ್ನ ಮಾಡಿದ್ದಾರೆ. ಅದರೆ ಸವಾರ ದ್ವಿಚಕ್ರ ವಾಹನದಲ್ಲಿ ವೇಗವಾಗಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚಿದ ರಾಬರಿ!
ಇನ್ನು ರಾಬರಿಗೆ ಯತ್ನ ನಡೆದಿರುವ ಸ್ಥಳದಲ್ಲಿ ಹಲವು ದಿನಗಳಿಂದ ರಾಬರಿಗಳು ನಡೆಯುತ್ತಿದ್ದು, ಕಳ್ಳರು ದ್ವಿಚಕ್ರ ವಾಹನ ಸವಾರರ ಬಳಿ ದೋಚುತ್ತಿದ್ದಾರೆ. ಆದರೂ ಸಹ ದೇವನಹಳ್ಳಿ ಪೊಲೀಸರು ಎಚ್ಚೆತ್ತುಕೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಕೇವಲ ನೆಪ ಮಾತ್ರಕ್ಕೆ ದೇವನಹಳ್ಳಿ ಪೊಲೀಸರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದು, ಸಾರ್ವಜನಿಕರು ಭಯದ ವಾತಾವರಣದಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.


