ಶಿವಮೊಗ್ಗ ಕೃಷಿ ಮೇಳದಲ್ಲಿ ಫ್ಲೆಕ್ಸ್ ಗಲಾಟೆ: ಸಂಸದ ಬಿ.ವೈ. ರಾಘವೇಂದ್ರ ಆಕ್ರೋಶ
ಕೃಷಿ ಮೇಳ ಕಾಂಗ್ರೆಸ್ ಕಾರ್ಯಕ್ರಮವೋ? – ವೇದಿಕೆಯಲ್ಲೇ ಪ್ರಶ್ನಿಸಿದ ಸಂಸದ
ರಾಜಕೀಯರಾಜ್ಯLATEST NEWS
S3 Media House
10/30/20261 min read


ಶಿವಮೊಗ್ಗ: ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಕೃಷಿ ಮೇಳದಲ್ಲಿ ಫ್ಲೆಕ್ಸ್ ವಿಚಾರವಾಗಿ ಗದ್ದಲ ಉಂಟಾಗಿದೆ. ಕೃಷಿ ಮೇಳದ ಮಾರ್ಗದುದ್ದಕ್ಕೂ ಕಾಂಗ್ರೆಸ್ ನಾಯಕರ ಫ್ಲೆಕ್ಸ್‌ಗಳನ್ನು ಅಳವಡಿಸಿರುವುದನ್ನು ಕಂಡು ಸಂಸದ ಬಿ.ವೈ. ರಾಘವೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೃಷಿ ಮೇಳವು ಸರ್ಕಾರಿ ಕಾರ್ಯಕ್ರಮವೋ ಅಥವಾ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೋ ಎಂದು ಸಂಸದರು ಪ್ರಶ್ನಿಸಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯಕ್ರಮಗಳಲ್ಲಿ ಆಯಾ ಪಕ್ಷದ ನಾಯಕರು ಫ್ಲೆಕ್ಸ್ ಹಾಕಿಕೊಳ್ಳಲಿ. ಆದರೆ ಕೃಷಿ ಕಾಲೇಜಿನ ಅಧಿಕೃತ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರ ಫ್ಲೆಕ್ಸ್‌ಗಳನ್ನು ಹಾಕುವ ಅಗತ್ಯವೇನಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಶಾಸಕ ಎಸ್.ಎನ್. ಚನ್ನಬಸಪ್ಪ ಕೂಡ ಸಂಸದರಿಗೆ ಬೆಂಬಲ ನೀಡಿದ್ದಾರೆ. ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಿ, ಈ ರೀತಿ ನಡೆಸಿಕೊಳ್ಳುವುದಾದರೆ ನಾವು ಕಾರ್ಯಕ್ರಮಕ್ಕೆ ಬರಬೇಕೋ ಬೇಡವೋ ಎಂದು ಸಂಸದರು ಪ್ರಶ್ನಿಸಿದ್ದಾರೆ.
ಸರ್ಕಾರಕ್ಕೆ ಗೌರವ ನೀಡಬೇಕು ಎಂಬುದು ಒಪ್ಪುವ ವಿಚಾರ. ಆದರೆ ನಮ್ಮನ್ನು ಈ ರೀತಿ ಡಿ-ಗ್ರೇಡ್ ಮಾಡುವುದೇಕೆ? ಇಂತಹ ವ್ಯವಸ್ಥೆ ಮಾಡುವುದಾದರೆ ನಮ್ಮನ್ನು ಕಾರ್ಯಕ್ರಮಕ್ಕೆ ಯಾಕೆ ಕರೆಯುತ್ತೀರಿ ಎಂದು ವಿಶ್ವವಿದ್ಯಾಲಯದ ಆಯೋಜಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸಂಸದರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ವಿಶ್ವವಿದ್ಯಾಲಯದ ಪ್ರಮುಖರು, ಫ್ಲೆಕ್ಸ್ ವಿಚಾರದಲ್ಲಿ ತಪ್ಪಾಗಿರುವುದನ್ನು ಒಪ್ಪಿಕೊಂಡು, ಅದನ್ನು ಸರಿಪಡಿಸುವುದಾಗಿ ಭರವಸೆ ನೀಡಿ ಕ್ಷಮೆಯಾಚಿಸಿದ್ದಾರೆ.
ಒಟ್ಟಿನಲ್ಲಿ, ಕೃಷಿ ಮೇಳದಂತಹ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರ ಫ್ಲೆಕ್ಸ್‌ಗಳ ಅಳವಡಿಕೆ ಈಗ ಶಿವಮೊಗ್ಗದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.


