ಫುಟ್‌ಪಾತ್ ತೆರವು ವೇಳೆ ಮೆಜೆಸ್ಟಿಕ್‌ನಲ್ಲಿ ಹೈಡ್ರಾಮಾ
ಲೈಸೆನ್ಸ್ ಕೊಟ್ಟು ಈಗ ತೆರವು? ಅಧಿಕಾರಿಗಳ ವಿರುದ್ಧ ಆಕ್ರೋಶ
ಸಾರ್ವಜನಿಕ ಸಮಸ್ಯೆಗಳುLATEST NEWS
S3 Media House
7/1/20261 min read


ಬೆಂಗಳೂರಿನ ಮೆಜೆಸ್ಟಿಕ್ ಸುತ್ತಮುತ್ತ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಬಿಎ ಅಧಿಕಾರಿಗಳು ಅಂಗಡಿಗಳನ್ನು ತೆರವುಗೊಳಿಸಲು ಮುಂದಾಗುತ್ತಿದ್ದಂತೆ, ಅಂಗಡಿಕಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
"ನಾವು ಕಳೆದ 30 ವರ್ಷಗಳಿಂದ ಇಲ್ಲಿಯೇ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಇಷ್ಟು ದಿನ ಇರದ ನಿಯಮಗಳನ್ನು ಈಗ ಏಕಾಏಕಿ ಜಾರಿಗೆ ತಂದರೆ ಹೇಗೆ?" ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, "ಬಲವಂತವಾಗಿ ಅಂಗಡಿ ತೆರವು ಮಾಡಲು ಮುಂದಾದರೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೂ, "ಕಳೆದ ತಿಂಗಳಷ್ಟೇ ಇದೇ ಜಿಬಿಎ ಅಧಿಕಾರಿಗಳು ನಮಗೆ ಲೈಸೆನ್ಸ್ ಕಾರ್ಡ್ ನೀಡಿದ್ದರು. ಈಗ ಅದೇ ಅಧಿಕಾರಿಗಳು ಅಂಗಡಿಗಳನ್ನು ತೆರವುಗೊಳಿಸಲು ಬಂದಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯಿಂದ ಸ್ಥಳದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿದ್ದು, ಅಂಗಡಿಕಾರರು ಸರ್ಕಾರದ ವಿರುದ್ಧ ಹಾಗೂ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.


