ಚನ್ನರಾಯಪಟ್ಟಣ ರೈತರಿಗೆ ಮತ್ತೆ ಸಂಕಷ್ಟ: ಭೂಸ್ವಾಧೀನಕ್ಕೆ ಹೊಸ ಗಡುವು
'ಅವಧಿ ವಿಸ್ತರಣೆ ಬೇಡ'—ದೇವನಹಳ್ಳಿಯಲ್ಲಿ ರೈತರ ಎಚ್ಚರಿಕೆ
ಸಾರ್ವಜನಿಕ ಸಮಸ್ಯೆಗಳುLATEST NEWSಕೃಷಿ
S3 Media House
7/4/20261 min read


ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ ಮತ್ತೊಮ್ಮೆ ಭೂಸ್ವಾಧೀನ ವಿಚಾರ ಕಾವೇರಿದೆ. ಭೂಸ್ವಾಧೀನಕ್ಕೆ ಸರ್ಕಾರ ಅವಧಿ ವಿಸ್ತರಣೆ ಮಾಡಿರುವ ನಿರ್ಧಾರಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಬಿಡದಿ ಟೌನ್‌ಶಿಪ್ ರೈತರ ಹೋರಾಟ ನಡೆಯುತ್ತಿದ್ದರೆ, ಮತ್ತೊಂದೆಡೆ ಚನ್ನರಾಯಪಟ್ಟಣದ ರೈತರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಸದಸ್ಯರು ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಬ್ರೇಕ್ ಹಾಕಲಾಗಿತ್ತು. ಜೊತೆಗೆ, ಭೂಮಿ ನೀಡಲು ಸಮ್ಮತಿಸಿದ ರೈತರಿಂದಲೇ ಭೂಮಿ ಖರೀದಿ ಮಾಡುವ ಷರತ್ತು ವಿಧಿಸಿ, ಮೂರು ತಿಂಗಳೊಳಗೆ ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿತ್ತು.
ಆದರೆ, ಆ ಅವಧಿ ಮುಕ್ತಾಯಗೊಂಡಿದ್ದರೂ ಇದೀಗ ಸರ್ಕಾರ ಮತ್ತೊಮ್ಮೆ ನಾಲ್ಕು ತಿಂಗಳ ಕಾಲ ಅವಧಿಯನ್ನು ವಿಸ್ತರಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
"ಕೊಟ್ಟ ಮಾತಿನಿಂದ ಹಿಂದೆ ಸರಿದು, ಮತ್ತೆ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಸರ್ಕಾರ ಮಾಡುತ್ತಿದೆ" ಎಂದು ರೈತರು ಆರೋಪಿಸಿದ್ದಾರೆ. ಕೂಡಲೇ ಈ ಅವಧಿ ವಿಸ್ತರಣೆಯ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ರೈತರು, ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚೆ ನಡೆಸಿದ್ದಾರೆ.


