ಗೌರಿ ಗಣೇಶ ಹಬ್ಬ ಜೋರು : ಇದು ಚುನಾವಣಾ ಎಫೆಕ್ಟ್ ಗುರು!

ಯುವಕರ ಬಳಗಕ್ಕೆ ಹರಿದು ಬರುತ್ತಿದೆ ಭರಪೂರ ಅನುದಾನ!

ವಿಶೇಷ ವರದಿLATEST NEWS

S3 Media House

9/13/20261 min read

ಹೌದು, ಈ ಬಾರಿಯ ಗೌರಿ ಗಣೇಶ ಹಬ್ಬ ಗ್ರಾಮಾಂತರ ಪ್ರದೇಶದಲ್ಲಿ ಸಖತ್ ಜೋರಾಗಿ ಆಚರಣೆ ಮಾಡುತ್ತಿದ್ದಾರೆ. ಸಣ್ಣ ಸಣ್ಣ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸುತ್ತಿದ್ದ ಯುವಕರ ಗುಂಪುಗಳು ಬೃಹದಾಕಾರದ ಮೂರ್ತಿಗಳನ್ನು ತಂದು ಪ್ರತಿಷ್ಠಾಪಿಸಲು ಮುಂದಾಗಿದ್ದಾರೆ. ಜೊತೆಗೆ ಆಗಮನ ಎಂಬ ಕಾರ್ಯಕ್ರಮಗಳನ್ನು ಆಯೋಜಿಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ.ಈ ಕಾರ್ಯಕ್ರಮದಲ್ಲಿ ಹಲವು ಸಾಂಸ್ಕೃತಿಕ ತಂಡಗಳು ಕಲಾ ಪ್ರದರ್ಶನ ಸಹ ಮಾಡುತ್ತಿದ್ದು, ಅವರಿಗೂ ಸಹ ಸಾಕಷ್ಟು ಹಣ ವ್ಯಯಿಸುತ್ತಿದ್ದಾರೆ.

ನಾ ಮುಂದು ತಾ ಮುಂದು ಎಂದು ಒಂದು ಗುಂಪಿಗಿಂತ ಮತ್ತೊಂದು ಗುಂಪು ದೊಡ್ಡ ದೊಡ್ಡ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ. ಬೃಹತ್ ಬೆಂಗಳೂರಿಗಿಂತಹ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳು ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಮೂಷಿಕ ವಾಹನನ ಪ್ರತಿಷ್ಠಾಪನೆ ಬೃಹತ್ ವೇದಿಕೆಗಳು ಸಿದ್ಧವಾಗುತ್ತಿವೆ.

ಚುನಾವಣಾ ಎಫೆಕ್ಟ್!

ಈ ಬಾರಿ ಗ್ರಾಮಾಂತರ ಪ್ರದೇಶಗಳಲ್ಲಿ ಅದ್ಧೂರಿ ಗಣೇಶೋತ್ಸವ ಆಚರಣೆ ಮಾಡಲು ಮುಂಬರುವ ಗ್ರಾಮ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳೇ ಕಾರಣ ಎಂಬುದು ಸಾರ್ವಜನಿಕರ ಮಾತಾಗಿದೆ. ಮುಂಬರುವ ಚುನಾವಣೆಗಳಲ್ಲಿ ಯುವಕರನ್ನು ತಮ್ಮತ್ತ ಸೆಳೆಯಲು ಕೇವಲ ರಾಜಕೀಯ ಪಕ್ಷಗಳು ಮಾತ್ರವಲ್ಲ , ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷೆ ಹೊಂದಿರುವವರು ಸಹ ಕಸರತ್ತು ನಡೆಸಿದ್ದಾರೆ.

ಮೋದಕ ಹಸ್ತನನ್ನು ಪ್ರತಿಷ್ಠಾಪನೆ ಮಾಡುವಂತಹ ಯುವಕರಿಗೆ ಲಕ್ಷ ಲಕ್ಷ ಹಣ ಕೊಟ್ಟು ಅದ್ಧೂರಿಯಾಗಿ ಕಾರ್ಯಕ್ರಮ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ. ಜಿದ್ದಿಗೆ ಬಿದ್ದಂತೆ ಓರ್ವ ಆಕಾಂಕ್ಷಿ ಲಕ್ಷ ಕೊಟ್ಟರೇ ಅದೇ ವಾರ್ಡ್ ನ ಮತ್ತೊಬ್ಬ ಆಕಾಂಕ್ಷಿ ಲಕ್ಷಕ್ಕಿಂತ ಹೆಚ್ಚು ಮೊತ್ತದ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಯುವಕರಿಗೆ ಸಾಥ್ ನೀಡುತ್ತಿದ್ದಾರೆ.

ಶಕ್ತಿ ಪ್ರದರ್ಶನದ ವೇದಿಕೆ!

ಒಂದು ಕಡೆ ವಿನಾಯಕನ ಪ್ರತಿಷ್ಠಾಪನೆ ಮತ್ತು ಮೆರವಣಿಗೆ ಹಾಗೂ ಆಗಮನ ಕಾರ್ಯಕ್ರಮಗಳಿಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡುತ್ತಿರುವ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಚುನಾವಣಾ ಆಕಾಂಕ್ಷಿಗಳು ಮತ್ತೊಂದೆಡ ಇದನ್ನು ಶಕ್ತಿ ಪ್ರದರ್ಶನದ ವೇದಿಕೆಯನ್ನಾಗಿಸಿಕೊಂಡಿದ್ದಾರೆ. ಕಾರ್ಯಕ್ರಮಗಳಿಗೆ ಅಪಾರ ಪ್ರಮಾಣದ ಜನರನ್ನು ಸೇರಿಸುವುದು, ಹೆಚ್ಚು ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಸೇರಿದಂತೆ ಹಲವು ರೀತಿಯಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಇನ್ನು ಆಕಾಂಕ್ಷಿಗಳಂತೂ ತಮ್ಮ ಬಳಗ ಇಷ್ಟು ದೊಡ್ಡ ಮಟ್ಟದಲ್ಲಿದೆ ಎಂದು ರಾಜಕೀಯ ಪಕ್ಷಗಳಿಗೆ ತೋರಿಸಲು ಗಣೇಶ ಪ್ರತಿಷ್ಠಾಪನೆಯನ್ನು ವೇದಿಕೆ ಮಾಡಿಕೊಂಡಿದ್ದಾರೆ.

ಒಟ್ಟಾರೆ ಈ ಬಾರಿ ಗ್ರಾಮಾಂತರ ಭಾಗದ ಯುವ ತಂಡಗಳು ವಿಜೃಂಭಣೆಯಿಂದ ಗಣೇಶ ಪ್ರತಿಷ್ಠಾಪನೆ ಮಾಡುತ್ತಿದ್ದು, ಸಖತ್ ಖುಷಿಯಾಗಿದ್ದಾರೆ. ಮತ್ತೊಂದೆಡೆ ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಆಕಾಂಕ್ಷಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಹಬ್ಬವನ್ನು ವೇದಿಕೆಯಾಗಿಸಿಕೊಂಡಿದ್ದಾರೆ.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.