ಪಾಲಿಕೆ ಚುನಾವಣೆಗೆ ಮತ್ತೊಂದು ಟ್ವಿಸ್ಟ್: ಆಗಸ್ಟ್ 31 ಗಡುವು ಮೀರುವ ಸಾಧ್ಯತೆ
ಚುನಾವಣಾ ಪ್ರಕ್ರಿಯೆಗೆ ಹೆಚ್ಚುವರಿ ಕಾಲಾವಕಾಶ ನೀಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ
LATEST NEWSಬೆಂಗಳೂರು
S3 Media House
7/10/20261 min read


ಬೆಂಗಳೂರು: ರಾಜಧಾನಿ ಬೆಂಗಳೂರಿನ ಐದು ಹೊಸ ಮಹಾನಗರ ಪಾಲಿಕೆಗಳ ಚುನಾವಣೆಗೆ ಮತ್ತೆ ವಿಳಂಬವಾಗುವ ಸಾಧ್ಯತೆಗಳು ಎದುರಾಗಿವೆ. ಸುಪ್ರೀಂ ಕೋರ್ಟ್ ಆಗಸ್ಟ್ 31ರೊಳಗೆ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ನೀಡಿದ್ದ ಗಡುವು ಸಮೀಪಿಸುತ್ತಿರುವ ನಡುವೆಯೇ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ.
ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಗೆ ಹೆಚ್ಚುವರಿ ಕಾಲಾವಕಾಶ ನೀಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾಗಿ ಆಗಸ್ಟ್ 31ರೊಳಗೆ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿತ್ತು.
ಆದರೆ ಭಾರತೀಯ ಚುನಾವಣಾ ಆಯೋಗ ರಾಜ್ಯಾದ್ಯಂತ ಕೈಗೊಂಡಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸ್ಥಳೀಯ ಸಂಸ್ಥೆಗಳ ಚುನಾವಣಾ ವೇಳಾಪಟ್ಟಿಗೆ ಅಡ್ಡಿಯಾಗುತ್ತಿರುವುದು ತಿಳಿದುಬಂದಿದೆ.
ಪ್ರಸ್ತುತ ಬೆಂಗಳೂರು ನಗರದಲ್ಲಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ಹೊಸ ಮತದಾರರ ಸೇರ್ಪಡೆ, ಮತದಾರರ ವಿವರಗಳ ಪರಿಶೀಲನೆ ಹಾಗೂ ಮತಗಟ್ಟೆಗಳ ಮರುಹಂಚಿಕೆ ಕಾರ್ಯದಲ್ಲಿ ನಿರತರಾಗಿದ್ದಾರೆ.
ಇದೇ ಅಧಿಕಾರಿಗಳು ವಿಧಾನಸಭೆ, ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣಾ ಜವಾಬ್ದಾರಿಯನ್ನೂ ನಿರ್ವಹಿಸುತ್ತಿರುವುದರಿಂದ ಆಡಳಿತಾತ್ಮಕ ಒತ್ತಡ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಷ್ಕೃತ ಮತದಾರರ ಪಟ್ಟಿ ಸಿದ್ಧವಾಗುವ ಮುನ್ನವೇ ಚುನಾವಣೆ ನಡೆಸಿದರೆ ಅನೇಕ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆ ಇದೆ ಎಂಬ ಆತಂಕವೂ ವ್ಯಕ್ತವಾಗಿದೆ.
ಹೀಗಾಗಿ ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ಚುನಾವಣಾ ಪ್ರಕ್ರಿಯೆಗೆ ಹೆಚ್ಚುವರಿ ಕಾಲಾವಕಾಶ ನೀಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ. ಇದರಿಂದ ಬೆಂಗಳೂರಿನ ಪಾಲಿಕೆ ಚುನಾವಣೆ ಮತ್ತೊಮ್ಮೆ ಮುಂದೂಡಿಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.


