ರಾಜ್ಯಸಭೆ ವ್ಯಾಮೋಹ ನನಗಿಲ್ಲ; ನನ್ನ ರಾಜಕೀಯ ಜೀವನವೇ ಇತಿಹಾಸ: ದೇವೇಗೌಡ!
ನನಗೆ ರಾಜ್ಯಸಭೆ ಮುಂದುವರಿಸುವ ವ್ಯಾಮೋಹ ಇದ್ದಿದ್ದರೆ ದೆಹಲಿಗೆ ಹೋಗುತ್ತಿದ್ದೆ: ದೇವೇಗೌಡ!
ರಾಜಕೀಯ
S3 Media House
6/10/20261 min read


ರಾಜ್ಯಸಭೆ ಸ್ಥಾನಕ್ಕೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ಚರ್ಚೆಗಳ ಬಗ್ಗೆ ಮಾಜಿ ಪ್ರಧಾನಿ H. D. ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ. ತಮ್ಮ ರಾಜ್ಯಸಭೆ ಪ್ರವೇಶದ ಬಗ್ಗೆ ಹಲವು ರೀತಿಯ ಮಾತುಗಳು ಕೇಳಿಬರುತ್ತಿದ್ದು, ತಮಗೆ ಅಪಮಾನವಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಇದರಿಂದ ತಾವು ಯಾವುದೇ ಬೇಸರಗೊಂಡಿಲ್ಲ ಎಂದು ದೇವೇಗೌಡ ತಿಳಿಸಿದ್ದಾರೆ.
1960ರಲ್ಲೇ ರಾಜಕೀಯ ಪ್ರವೇಶ ಮಾಡಿದ ನಾನು, ಜೀವನವಿಡೀ ಜನರ ಸೇವೆಗಾಗಿ ಹೋರಾಟ ನಡೆಸಿದ್ದೇನೆ. ನನ್ನ ರಾಜಕೀಯ ಜೀವನವೇ ಒಂದು ಇತಿಹಾಸ ಎಂದು ಅವರು ಹೇಳಿದ್ದಾರೆ. ಮಾಧ್ಯಮಗಳು ರಾಜ್ಯಸಭೆ ಆಕಾಂಕ್ಷಿಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನೂ ಸೇರಿಸಿ ವ್ಯಾಪಕ ಪ್ರಚಾರ ಮಾಡಿದ್ದವು. ಆದರೆ ಅದಕ್ಕೆ ನಾನು ಅಸಮಾಧಾನಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು 26ರಂದು ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಭಾಗವಹಿಸಿದ್ದರು. ಕಾರ್ಯಕ್ರಮದ ಬಳಿಕ ತಾವು ನೇರವಾಗಿ ಬೆಂಗಳೂರಿಗೆ ಮರಳಿದ್ದಾಗಿ ದೇವೇಗೌಡ ಹೇಳಿದ್ದಾರೆ. ರಾಜ್ಯಸಭೆ ಸದಸ್ಯತ್ವ ಮುಂದುವರಿಸುವ ವ್ಯಾಮೋಹ ನನಗಿದ್ದರೆ, ನಾನು ದೆಹಲಿಗೆ ತೆರಳಿ ಕೇಂದ್ರ ನಾಯಕರನ್ನು ಭೇಟಿ ಮಾಡುತ್ತಿದ್ದೆ. ಆದರೆ ಅಂತಹ ಪ್ರಯತ್ನವನ್ನು ನಾನು ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ, ನಾವು ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು H. D. ಕುಮಾರಸ್ವಾಮಿ ಹೇಳಿರುವುದನ್ನು ಸ್ವಾಗತಿಸಿರುವುದಾಗಿ ದೇವೇಗೌಡ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಸಂಬಂಧವನ್ನು ಕೇವಲ ಒಂದು ರಾಜ್ಯಸಭೆ ಸ್ಥಾನಕ್ಕೆ ಸೀಮಿತಗೊಳಿಸಿ ರಾಜ್ಯದ ಜನರು ಅರ್ಥೈಸಬಾರದು ಎಂದು ಅವರು ಹೇಳಿದ್ದಾರೆ. ರಾಜಕೀಯ ಹುದ್ದೆಗಳಿಗಿಂತ ಜನಸೇವೆ ಮತ್ತು ತಮ್ಮ ದೀರ್ಘ ರಾಜಕೀಯ ಪಯಣವೇ ಮುಖ್ಯ ಎಂಬ ಸಂದೇಶವನ್ನು ದೇವೇಗೌಡ ಈ ಮೂಲಕ ನೀಡಿದ್ದಾರೆ.


