ಜೆಡಿಎಸ್ ನಿಂದ ಡಮ್ಮಿ ಅಭ್ಯರ್ಥಿ ನಿಲ್ಲಿಸಲು ಫಿಕ್ಸಿಂಗ್ ಮಾಡ್ತಿದ್ದವರಿಗೆ ಭ್ರಷ್ಟಾಚಾರದ ಬಗ್ಗೆ ಮಾತಾಡೋ ನೈತಿಕತೆ ಎಲ್ಲಿದೆ?: ಮಾಜಿ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ವಾಗ್ದಾಳಿ!

ರಾಜಕೀಯ

S3 Media House

6/16/20261 min read

ರಸಗೊಬ್ಬರ ಅಭಾವ ಹಾಗೂ ಬಿಡದಿ ಟೌನ್ಶಿಪ್ ವಿಚಾರದಲ್ಲಿ ವಿರೋಧ ಪಕ್ಷಗಳು ದ್ವಂದ್ವ ರಾಜಕಾರಣ ಮಾಡುತ್ತಿವೆ. ಅದರಲ್ಲೂ ಜೆಡಿಎಸ್ ಅವಧಿಯಲ್ಲಿ ನಡೆದ ಟಿಕೆಟ್ ಫಿಕ್ಸಿಂಗ್ ಹಾಗೂ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಮಾಜಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ನಿಲುವುಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರಸಗೊಬ್ಬರ ಅಭಾವ:

ವಿಪಕ್ಷಗಳ ದ್ವಂದ್ವ ನಿಲುವು

"ಕಳೆದ ಎರಡು ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರ ಸಾವಯವ ಗೊಬ್ಬರ ಬಳಕೆಗೆ ಒತ್ತು ನೀಡಿದಾಗ, 'ಬರೀ ಸಾವಯವದಿಂದ ರೈತ ಬದುಕಲು ಸಾಧ್ಯವಿಲ್ಲ' ಎಂದು ಇದೇ ವಿರೋಧ ಪಕ್ಷಗಳು ಟೀಕೆ ಮಾಡಿದ್ದವು. ಆದರೆ, ಈಗ ಪ್ರಧಾನಿ ನರೇಂದ್ರ ಮೋದಿಯವರೇ ಸಾವಯವ ಗೊಬ್ಬರ ಬಳಸಿ ಎಂದು ಹೇಳುತ್ತಿದ್ದಾರೆ. ಈಗ ಆರ್. ಅಶೋಕ್ ಹಾಗೂ ಬಿ.ವೈ. ವಿಜಯೇಂದ್ರ ಅವರು ಏನು ಹೇಳುತ್ತಾರೆ? ಕೇಂದ್ರ ಸರ್ಕಾರವನ್ನು ಟೀಕಿಸುತ್ತಾರೋ ಅಥವಾ ಹೊಗಳುತ್ತಾರೋ ಕಾದು ನೋಡಬೇಕಿದೆ" ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು.

"ನಾನು ಕೃಷಿ ಸಚಿವನಾಗಿದ್ದಾಗಲೇ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳಿಗೆ ರೈತರಿಗೆ ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದೆ. ಅಧಿಕಾರಿಗಳು ಈಗಲೂ ಅದನ್ನು ಪಾಲಿಸುತ್ತಿದ್ದಾರೆ. ಈಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ವಿಪಕ್ಷಗಳು ಇದನ್ನು ದೊಡ್ಡದಾಗಿ ಬಿಂಬಿಸಿ ರೈತರಲ್ಲಿ ಆತಂಕ ಸೃಷ್ಟಿಸುವುದು ಬೇಡ" ಎಂದು ಮನವಿ ಮಾಡಿದರು.

ವಿರೋಧ ಪಕ್ಷದ ನಾಯಕತ್ವ ಉಳಿಸಿಕೊಳ್ಳಲು ಆರ್. ಅಶೋಕ್ ಹೋರಾಟ,

ಯಾವುದೇ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ಕನಿಷ್ಠ 2 ರಿಂದ 3 ತಿಂಗಳು ಸಮಯ ಕೊಟ್ಟು, ನಂತರ ಟೀಕೆ ಟಿಪ್ಪಣಿ ಮಾಡುವ ರಾಜಕೀಯ ಸಂಸ್ಕಾರವಿರಬೇಕು. ಡಿ.ಕೆ. ಶಿವಕುಮಾರ್ ಅವರಿಗೆ ಆಡಳಿತದ ಅನುಭವ ಇಲ್ಲ ಎಂದೇನೂ ಇಲ್ಲ, ಅವರು ಹಿಂದೆ ಸಿದ್ದರಾಮಯ್ಯ ಅವರ ಜೊತೆ ಡಿಸಿಎಂ ಆಗಿ ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿ, ಅಶೋಕ್ ಎಲ್ಲರೂ ಐದಾರು ತಿಂಗಳು ಸರ್ಕಾರಕ್ಕೆ ಸಮಯ ಕೊಡುತ್ತೇವೆ ಎಂದು ಹೇಳಿದ್ದರೆ ರಾಜಕಾರಣದಲ್ಲಿ ಒಂದು ಒಳ್ಳೆಯ ಭಾವನೆ ಬರುತ್ತಿತ್ತು.

ಆದರೆ, ಡಿ.ಕೆ. ಶಿವಕುಮಾರ್ ಅವರು ಪದಗ್ರಹಣ ಮಾಡಿದ ದಿನದಿಂದಲೇ ಆರ್. ಅಶೋಕ್ ಅವರು ನಾಲಿಗೆ ಹರಿಬಿಡುತ್ತಿದ್ದಾರೆ. ತಮ್ಮ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಉಳಿಸಿಕೊಳ್ಳಲು ಅವರು ದಿನನಿತ್ಯ ಇಂತಹ ಪ್ರದರ್ಶನ ನೀಡುತ್ತಿದ್ದಾರೆ. ಅಶೋಕ್ ಅವರು ತಮ್ಮ ಭಾಷೆಯ ಮೇಲೆ ಹಿಡಿತ ಸಾಧಿಸಿ ಮಾತನಾಡಿದರೆ ಒಳ್ಳೆಯದು ಎಂದು ಎಚ್ಚರಿಸಿದರು.

ದೇವೆಗೌಡರು- ಎಸ್.ಎಂ.ಕೃಷ್ಣ ನಮ್ಮ ಸಮಾಜದ ಮುತ್ಸದ್ದಿಗಳು,

ಹೆಚ್.ಡಿ. ದೇವೇಗೌಡರು ಹಾಗೂ ಎಸ್.ಎಂ. ಕೃಷ್ಣ ಅವರು ನಮ್ಮ ಸಮಾಜದ ಹಿರಿಯ ಮುತ್ಸದ್ದಿಗಳಾಗಿದ್ದು, ಅವರನ್ನು ನಾವು ಗೌರವಿಸಬೇಕು ಎಂದು ಡಿ.ಕೆ. ಶಿವಕುಮಾರ್ ಅವರೇ ಖಾಸಗಿ ಮಾತುಕತೆಯ ವೇಳೆ ಹೇಳಿದ್ದರು. ದೇವೇಗೌಡರ ಮನೆಗೆ ಹೋಗಿ ಆಶೀರ್ವಾದ ಪಡೆದಿರುವುದು ಡಿಕೆಶಿ ಅವರ ಸಂಸ್ಕಾರವನ್ನು ತೋರಿಸುತ್ತದೆ. ಅಶೋಕ್ ಮತ್ತು ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಕನಿಷ್ಠ ಗೌರವ ಕೊಡಲು ಕಲಿಯಬೇಕು ಎಂದರು.

ಆಸ್ತಿ ತನಿಖೆಗೆ ಒಳಪಡಿಸಿಕೊಳ್ಳಿ:

ಹೆಚ್ಡಿಕೆಗೆ ಚಲುವರಾಯಸ್ವಾಮಿ ಸವಾಲು,

"ಡಿ.ಕೆ. ಶಿವಕುಮಾರ್ ಅವರಿಗೆ 1,400 ಕೋಟಿ ರೂ. ಎಲ್ಲಿಂದ ಉದುರಿತು?" ಎಂದು ಕೇಳುತ್ತಿರುವ ಕುಮಾರಸ್ವಾಮಿ ಅವರಿಗೆ ಚಲುವರಾಯಸ್ವಾಮಿಯವರು ತಿರುಗೇಟು ನೀಡಿದ್ದಾರೆ. "ಡಿ.ಕೆ. ಶಿವಕುಮಾರ್ ಅವರು ಮೊದಲಿನಿಂದಲೂ ಬ್ಯುಸಿನೆಸ್ಮೆನ್, ಅವರಿಗೆ ರಾಜಕಾರಣ ಒಂದು ಪ್ಯಾಶನ್ ಅಷ್ಟೇ. ಆದರೆ, ಹೆಚ್.ಡಿ. ದೇವೇಗೌಡರನ್ನು ಹೊರತುಪಡಿಸಿ ನಿಮ್ಮ ಇಡೀ ಕುಟುಂಬದ ಆಸ್ತಿಯನ್ನು ಘೋಷಣೆ ಮಾಡಲು ನೀವು ಸಿದ್ಧರಿದ್ದೀರಾ? ನಿಮ್ಮ ಕುಟುಂಬದಲ್ಲಿ ಎಷ್ಟು ಆಸ್ತಿ ಇದೆ, ಅದು ಎಲ್ಲಿಂದ ಬಂತು ಎಂದು ಸ್ವಯಂ ತನಿಖೆಗೆ ಒಳಪಡಿಸಿಕೊಳ್ಳಿ" ಎಂದು ಸವಾಲು ಹಾಕಿದರು.

"ನೀವು ಇದೇ ರೀತಿ ಮುಂದುವರಿದರೆ ನಿಮ್ಮ ಇಡೀ ಜಾತಕದ ದಾಖಲೆಗಳು ಡಿ.ಕೆ. ಶಿವಕುಮಾರ್ ಅವರ ಬಳಿ ಇವೆ. ಅವರು ಕೂಟ ರಾಜಕಾರಣದಲ್ಲಿ ಚಾಣಾಕ್ಯರಾಗಿದ್ದು, ಸೂಕ್ತ ಸಮಯ ಬಂದಾಗ ಎಲ್ಲಾ ದಾಖಲೆಗಳನ್ನು ಹೊರಹಾಕಲಿದ್ದಾರೆ. ಬರೀ ಮಾತನಾಡಿಯೇ ರಾಜಕಾರಣದಲ್ಲಿ ಸಕ್ಸಸ್ ಆಗ್ತೀನಿ ಅಂದುಕೊಂಡಿದ್ದರೆ ಅದು ತಪ್ಪು, ಒಂದಲ್ಲಾ ಒಂದು ದಿನ ಇದು ಮುಕ್ತಾಯವಾಗುತ್ತದೆ. ನಿಮ್ಮ ವಿರುದ್ಧ ಹೋರಾಡುವ ಶಕ್ತಿ ಡಿಕೆಶಿಗೆ ಇಲ್ಲ ಅಂದುಕೊಳ್ಳಬೇಡಿ, ನೀವು ಏನೇನೂ ಅಲ್ಲದ ಅವಧಿಯಲ್ಲೂ ಅವರು ದೇವೇಗೌಡರನ್ನೇ ಫೇಸ್ ಮಾಡಿದವರು" ಎಂದರು.

ತಂದೆಯ ಹೆಸರಿಲ್ಲದೆ ಗೆಲ್ಲುವ ಆತ್ಮವಿಶ್ವಾಸವಿದೆಯೇ?

ನೆರೆ ರಾಜ್ಯಗಳ ಉದಾಹರಣೆ ನೀಡಿದ ಚಲುವರಾಯಸ್ವಾಮಿ, "ತಮಿಳುನಾಡಿನ ಸ್ಟಾಲಿನ್ ಆಗಲಿ, ಆಂಧ್ರದ ಜಗನ್ಮೋಹನ್ ರೆಡ್ಡಿ ಆಗಲಿ ತಮ್ಮ ತಂದೆ ಇಲ್ಲದಿದ್ದರೂ ಸ್ವಂತ ಶಕ್ತಿಯಿಂದ ಹೋರಾಟ ಮಾಡಿ ಸಿಎಂ ಆಗಿದ್ದಾರೆ. ನಿಮ್ಮ ತಂದೆಯವರಾದ ದೇವೇಗೌಡರ ಹೆಸರಿಲ್ಲದೆ ನೀವು ಗೆದ್ದು ಬರ್ತೀನಿ ಅನ್ನೋ ಆತ್ಮವಿಶ್ವಾಸ ನಿಮಗಿದೆಯೇ? 'ಕಳೆದ ಚುನಾವಣೆಯಲ್ಲಿ 120 ಸ್ಥಾನ ಗೆಲ್ಲದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ' ಎಂದು ಹೇಳಿದ್ದಿರಿ, ವಿಸರ್ಜನೆ ಮಾಡಿದ್ರಾ?" ಎಂದು ಹೆಚ್ಡಿಕೆಯನ್ನು ಪ್ರಶ್ನಿಸಿದರು.

ಡಮ್ಮಿ ಅಭ್ಯರ್ಥಿಗಳನ್ನ ನಿಲ್ಲಿಸಲು ಫಿಕ್ಸಿಂಗ್:

ಬಹಿರಂಗ ಚರ್ಚೆಗೆ ಪಂಥಾಹ್ವಾನ

ಕುಮಾರಸ್ವಾಮಿ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಮಾಡಿದ ಅವರು, "ಜೆಡಿಎಸ್ನಲ್ಲಿ ಟಿಕೆಟ್ ಕೊಡಲು ಹಾಗೂ ಇನ್ನೊಬ್ಬರನ್ನು ಸೋಲಿಸಲು ಡಮ್ಮಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಎಷ್ಟೆಷ್ಟು ಹಣ 'ಫಿಕ್ಸ್' ಮಾಡಲಾಗುತ್ತಿತ್ತು ಎಂಬುದು ನನಗೆ ಚೆನ್ನಾಗಿ ಗೊತ್ತು. ಏಕೆಂದರೆ ನಾನು ಕೂಡ ದೀರ್ಘಕಾಲ ಅವರ ಜೊತೆಯಲ್ಲೇ ಇದ್ದವನು. ಹಾಗಾಗಿ ಕುಮಾರಸ್ವಾಮಿ ಅವರು ವ್ಯಾಪಾರ ಮತ್ತು ಕರಪ್ಷನ್ ಬಗ್ಗೆ ಮಾತನಾಡುವ ನೈತಿಕತೆ ಹೊಂದಿಲ್ಲ. ಭ್ರಷ್ಟಾಚಾರದ ವಿಚಾರವಾಗಿ ಬಹಿರಂಗ ಚರ್ಚೆಗೆ ಬನ್ನಿ, ನಾನೊಬ್ಬನೇ ನೀವು ಕರೆದ ಜಾಗಕ್ಕೆ ಬರಲು ಸಿದ್ಧ" ಎಂದು ಬಹಿರಂಗ ಪಂಥಾಹ್ವಾನ ನೀಡಿದರು.

ಬಿಡದಿ ಟೌನ್ಶಿಪ್:

ರೈತರ ವಿಶ್ವಾಸ ಮುಖ್ಯ

ಬಿಡದಿ ಟೌನ್ಶಿಪ್ ಯೋಜನೆಗೆ ರೈತರ ವಿರೋಧವಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, " ಯೋಜನೆಯನ್ನು ಆರಂಭಿಸಿದ್ದೇ ಕುಮಾರಸ್ವಾಮಿ ಅವರು. ಅದನ್ನು ಈಗ ನಾವು ಮುಂದುವರಿಸುತ್ತಿದ್ದರೆ ಅವರೇ ವಿರೋಧಿಸುತ್ತಿದ್ದಾರೆ. ರೈತರನ್ನು ಒಕ್ಕಲೆಬ್ಬಿಸುವುದು ನಮ್ಮ ಸರ್ಕಾರದ ಉದ್ದೇಶವಲ್ಲ. ನಾಲ್ಕು ದಿನ ತಡವಾದರೂ ಪರವಾಗಿಲ್ಲ, ರೈತರನ್ನು ಸಂಪೂರ್ಣ ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಯನ್ನು ಮುಂದುವರಿಸುತ್ತೇವೆ. ನೋಟಿಫಿಕೇಶನ್ ಹೊರಡಿಸಿದ ತಕ್ಷಣ ಎಲ್ಲವೂ ಮುಗಿಯಿತು ಎಂದಲ್ಲ. ಸಿಎಂ ಶಿವಕುಮಾರ್ ಅವರು ಅದೇ ಜಿಲ್ಲೆಯವರಾಗಿದ್ದರಿಂದ ರೈತರನ್ನು ವಿಶ್ವಾಸಕ್ಕೆ ಪಡೆದೇ ಯೋಜನೆ ಕೈಗೆತ್ತಿಕೊಳ್ಳುತ್ತಾರೆ. ಬಗ್ಗೆ ಸಚಿವ ಸಂಪುಟ ಸಭೆಯಲ್ಲೂ ಚರ್ಚಿಸಲಾಗುವುದು. ಮುಂದೆ ಯೋಜನೆಯನ್ನು ಮಂಡ್ಯ ಹಾಗೂ ಮೈಸೂರುವರೆಗೂ ಕೊಂಡೊಯ್ಯುವ ಆಲೋಚನೆ ಇದೆ" ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಹಾಗೂ ಮೈಶುಗರ್ ಅಧ್ಯಕ್ಷರಾದ ಸಿ.ಡಿ. ಗಂಗಾಧರ್ ಉಪಸ್ಥಿತರಿದ್ದರು.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.