"ದೇವೇಗೌಡರು ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗಿಲ್ಲ: ಕಾಂಗ್ರೆಸ್ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ"
ರಾಜಕೀಯLATEST NEWS
S3 Media House
6/9/20261 min read


ಮಂಡ್ಯ ತಾಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಲವು ಮಹತ್ವದ ವಿಷಯಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ ಸಿಎಸ್‌ಆರ್ ಅನುದಾನದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದ ಅವರು, ಮಂಡ್ಯ ಜಿಲ್ಲೆಯ ರಸ್ತೆ ಅಭಿವೃದ್ಧಿಗಾಗಿ 54 ಕೋಟಿ ರೂಪಾಯಿ ಸಿಎಸ್‌ಆರ್ ಅನುದಾನ ಮಂಜೂರಾಗಿದೆ ಎಂದು ಹೇಳಿದರು.
ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತದ ಕುರಿತು ಮಾತನಾಡಿದ ಕುಮಾರಸ್ವಾಮಿ, ಘಟನೆ ಕುರಿತು ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾಗಿ ಹೇಳಿದರು. ಇದು ಆಕಸ್ಮಿಕವಾಗಿ ನಡೆದ ದುರಂತವಾಗಿದ್ದು, ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಕೆಲವೊಮ್ಮೆ ಇಂತಹ ಘಟನೆಗಳು ಸಂಭವಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಘಟನೆಯ ಸಂಪೂರ್ಣ ವರದಿ ಸಲ್ಲಿಸಲು ತಜ್ಞರ ತಂಡ ರಚಿಸಲಾಗಿದೆ. ಖಾಯಂ ಸಿಬ್ಬಂದಿಗೆ ನೀಡುವ ಪರಿಹಾರದಂತೆಯೇ ಹೊರಗುತ್ತಿಗೆ ನೌಕರರಿಗೂ ಪರಿಹಾರ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು. ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಇಲಾಖೆ ಭರಿಸಲಿದ್ದು, ನೊಂದ ಕುಟುಂಬಗಳಿಗೆ ಟೌನ್‌ಶಿಪ್‌ನಲ್ಲಿ ಮನೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಸಹಾಯ ನೀಡಲಾಗುತ್ತದೆ ಎಂದರು.
ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ನೀಡದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದೇವೇಗೌಡರ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಈಗ ಅನುಕಂಪ ಬಂದಿರುವಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಬಿರುಕು ತರಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ದೇವೇಗೌಡರು ರಾಜ್ಯಸಭೆ ಟಿಕೆಟ್‌ಗೆ ಅರ್ಜಿಯನ್ನೇ ಸಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ದೇವೇಗೌಡರು ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಪ್ರಧಾನಮಂತ್ರಿ ಹುದ್ದೆಯನ್ನೇ ತ್ಯಜಿಸಿ ಬಂದವರು ಎಂದು ಹೇಳಿದರು.
ಕಳೆದ ಬಾರಿ ಕಾಂಗ್ರೆಸ್ ಬೆಂಬಲದಿಂದ ದೇವೇಗೌಡರು ರಾಜ್ಯಸಭೆಗೆ ಹೋದರು ಎಂಬ ಹೇಳಿಕೆಯನ್ನು ತಳ್ಳಿಹಾಕಿದ ಅವರು, ಅವರ ವಿರುದ್ಧ ಅಭ್ಯರ್ಥಿ ನಿಲ್ಲುವ ಅವಕಾಶವೇ ಇರಲಿಲ್ಲ ಎಂದರು.
ಒಕ್ಕಲಿಗ ಸಮುದಾಯದ ಮುಖ್ಯಮಂತ್ರಿ ಬೇಕೆಂದಿದ್ದರೆ ರಾಜ್ಯಸಭೆ ಸ್ಥಾನದಿಂದ ಏನು ಪ್ರಯೋಜನ ಎಂಬ ಪ್ರಶ್ನೆಯನ್ನೂ ಕುಮಾರಸ್ವಾಮಿ ಮುಂದಿಟ್ಟರು.
ಚಲುವರಾಯಸ್ವಾಮಿ ನೀಡಿರುವ 'ದೇವೇಗೌಡರ ಮನೆಯಲ್ಲಿ ಸೂತಕ' ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.
ಜಮೀರ್ ಅಹಮದ್ ಜೊತೆ ಸಂಪರ್ಕದಲ್ಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಕಾಂಗ್ರೆಸ್‌ನ ಯಾವುದೇ ನಾಯಕರನ್ನು ನಾನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಸಲಹೆ ಕೇಳುವುದಾಗಿ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಏನು ಸಲಹೆ ನೀಡಲಿ? ಎರಡು ಬಾರಿ ಮುಖ್ಯಮಂತ್ರಿ ಆಗಿ ನಾನು ಏನು ಸಾಧನೆ ಮಾಡಿದ್ದೇನೆ ಎಂದು ಅವರೇ ಪ್ರಶ್ನಿಸಿದ್ದಾರೆ ಎಂದು ಹೇಳಿದರು.
ಎಲ್ಲದಕ್ಕೂ ಸಾಕ್ಷಿ ಬೇಕೆಂದು ಕೇಳುವವರಿದ್ದಾರೆ. ನಾನು ಏನೂ ಮಾಡಿಲ್ಲ ಎಂದು ಹೇಳುವವರೇ ಈಗ ಸಲಹೆ ಕೇಳುತ್ತಿದ್ದಾರೆ ಎಂದು ಟೀಕಿಸಿದರು.
ಅತಿ ವಿನಯಂ ದೂರ್ತ ಲಕ್ಷಣಂ ಎಂದು ಹೇಳಿದ ಕುಮಾರಸ್ವಾಮಿ, ತಾನು ಮುಖ್ಯಮಂತ್ರಿ ಆಗುವುದಕ್ಕಿಂತಲೂ ಜನರ ಶಕ್ತಿಯನ್ನು ಉಳಿಸುವುದು ಮುಖ್ಯ. ಆ ಶಕ್ತಿಯನ್ನು ಮೈತ್ರಿ ಪಕ್ಷಗಳಿಗೆ ತರಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು.




