ಬೆಂಗಳೂರಿನ ಹೋಟೆಲ್‌, ಪಬ್‌ಗಳ ಮೇಲೆ ಆಹಾರ ಇಲಾಖೆ ದಾಳಿ: 132 ಕೆ.ಜಿ. ಆಹಾರ ವಸ್ತು ವಶಕ್ಕೆ

ಯುಬಿ ಸಿಟಿಯ Hotel Skyನಲ್ಲಿ ಕೊಳೆತ ಮಾಂಸ ಪತ್ತೆ

LATEST NEWSಬೆಂಗಳೂರುಆರೋಗ್ಯ

S3 Media House

8/10/20261 min read

ಬೆಂಗಳೂರಿನ ಹೋಟೆಲ್‌, ಪಬ್‌ಗಳ ಮೇಲೆ ಆಹಾರ ಇಲಾಖೆ ದಾಳಿ: 132 ಕೆ.ಜಿ. ಆಹಾರ ವಸ್ತು ವಶಕ್ಕೆ

ಬೆಂಗಳೂರು: ನಗರದ ವಿವಿಧ ಹೋಟೆಲ್‌ಗಳು ಹಾಗೂ ಪಬ್‌ಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿ, ಬಳಕೆಗೆ ಯೋಗ್ಯವಲ್ಲದ ಹಾಗೂ ಕಳಪೆ ಗುಣಮಟ್ಟದ ಒಟ್ಟು 132 ಕೆ.ಜಿ. ಆಹಾರ ವಸ್ತುಗಳನ್ನು ವಶಪಡಿಸಿಕೊಂಡು, ನಿಯಮಾನುಸಾರ ವಿಲೇವಾರಿ ಹಾಗೂ ನಾಶಪಡಿಸಿದ್ದಾರೆ. ತಪಾಸಣೆ ವೇಳೆ ಬಳಸಿದ ಅಡುಗೆ ಎಣ್ಣೆಯೂ ಪತ್ತೆಯಾಗಿದ್ದು, ಆಹಾರ ಸುರಕ್ಷತಾ ನಿಯಮ ಉಲ್ಲಂಘಿಸಿರುವ ಸಂಸ್ಥೆಗಳಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಯುಬಿ ಸಿಟಿಯ Hotel Sky ಸೇರಿದಂತೆ ನಗರದ ಪ್ರಮುಖ ಹೋಟೆಲ್‌ಗಳು, ಪಬ್‌ಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ ಆಹಾರ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಒಟ್ಟು ಏಳು ಮಂದಿ ಆಹಾರ ಇಲಾಖೆ ಅಧಿಕಾರಿಗಳ ತಂಡ ವಿವಿಧೆಡೆ ಪರಿಶೀಲನೆ ನಡೆಸಿದ್ದು, ಆಹಾರ ಪದಾರ್ಥಗಳ ಗುಣಮಟ್ಟ, ಅವಧಿ, ಸಂಗ್ರಹಣೆ ಹಾಗೂ ಅಡುಗೆಮನೆಯ ಸ್ವಚ್ಛತೆ ಕುರಿತು ಪರಿಶೀಲನೆ ನಡೆಸಿದೆ.

ಯುಬಿ ಸಿಟಿಯ Hotel Skyನಲ್ಲಿ ಕೊಳೆತ ಮಾಂಸ ಪತ್ತೆ

ಯುಬಿ ಸಿಟಿಯ Hotel Skyನಲ್ಲಿ ತಪಾಸಣೆ ನಡೆಸಿದ ವೇಳೆ 45 ಕೆ.ಜಿ. ಕೊಳೆತ ಚಿಕನ್ ಹಾಗೂ ಬೀಫ್ ಪತ್ತೆಯಾಗಿದೆ. ಇದರೊಂದಿಗೆ 6 ಕೆ.ಜಿ. ವೆಜಿಟೆಬಲ್ ಕಟ್ಲೆಟ್ ಹಾಗೂ 15 ಲೀಟರ್ ಬಳಸಿದ ಅಡುಗೆ ಎಣ್ಣೆ ಕೂಡ ಪತ್ತೆಯಾಗಿದೆ.

ಹೋಟೆಲ್‌ನಲ್ಲಿ ಪತ್ತೆಯಾದ ಒಟ್ಟು 51 ಕೆ.ಜಿ. ಆಹಾರ ವಸ್ತುಗಳು ಬಳಕೆಗೆ ಯೋಗ್ಯವಲ್ಲ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಬಳಕೆಗೆ ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ನಿಯಮಾನುಸಾರ ನಾಶಪಡಿಸಲಾಗಿದೆ.

Royal Chain Hotelನಲ್ಲಿ ಬಾತುಕೋಳಿ ಮಾಂಸ, ಮೀನು ವಶ

Royal Chain Hotelನಲ್ಲಿ ನಡೆಸಿದ ಪರಿಶೀಲನೆ ವೇಳೆ 50 ಕೆ.ಜಿ. ಬಾತುಕೋಳಿ ಮಾಂಸ ಹಾಗೂ 5 ಕೆ.ಜಿ. ಮೀನು ಪತ್ತೆಯಾಗಿದ್ದು, ಒಟ್ಟು 55 ಕೆ.ಜಿ. ಆಹಾರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದಲ್ಲದೆ Madras Kitchenನಲ್ಲಿ 5 ಕೆ.ಜಿ. ಗ್ರೀನ್ ಪೀಸ್, Tescon Hotelನಲ್ಲಿ 5 ಕೆ.ಜಿ. ಮಶ್ರೂಮ್ ಹಾಗೂ Senchez Hotelನಲ್ಲಿ 3 ಕೆ.ಜಿ. ಮೀನು ಪತ್ತೆಯಾಗಿದೆ.

Senchez Hotelನಲ್ಲಿ 7 ಕೆ.ಜಿ. ಕೇಕ್, ಆಲೂಗಡ್ಡೆ ಹಾಗೂ ಟ್ಯಾಕೋಸ್ ಬಳಕೆಗೆ ಯೋಗ್ಯವಲ್ಲದ ಹಿನ್ನೆಲೆಯಲ್ಲಿ ವಿಲೇವಾರಿ ಮಾಡಲಾಗಿದೆ.

ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ನಲ್ಲೂ ಪರಿಶೀಲನೆ

ಯುಬಿ ಸಿಟಿಯ ಸ್ಕೈ ಲಾಂಜ್ ಬಳಿಕ ಅಧಿಕಾರಿಗಳು ಬ್ರಿಗೇಡ್ ರಸ್ತೆಯಲ್ಲಿರುವ ಹೋಟೆಲ್‌ಗಳು ಹಾಗೂ ಪಬ್‌ಗಳ ಮೇಲೂ ತಪಾಸಣೆ ನಡೆಸಿದ್ದಾರೆ. ಬಳಿಕ ಚರ್ಚ್ ಸ್ಟ್ರೀಟ್‌ನ ಹಲವು ಹೋಟೆಲ್‌ಗಳಲ್ಲಿಯೂ ಆಹಾರ ಪದಾರ್ಥಗಳ ಗುಣಮಟ್ಟ ಹಾಗೂ ಸಂಗ್ರಹಣಾ ವ್ಯವಸ್ಥೆಯನ್ನು ಪರಿಶೀಲಿಸಲಾಗಿದೆ.

ಚರ್ಚ್ ಸ್ಟ್ರೀಟ್‌ನ Peg & Bottles Pubನಲ್ಲಿ ಅಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆ ಹಲವು ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ.

ಪಬ್‌ನ ಫ್ರೀಜರ್‌ನಲ್ಲಿ ಕೊಳೆತ ಆಹಾರ; ಮಶ್ರೂಮ್‌ಗೆ ಫಂಗಸ್

Peg & Bottles Pubನಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು, ಫಂಗಸ್ ಬಂದ ಮಶ್ರೂಮ್ ಹಾಗೂ ಅವಧಿ ಮುಗಿದ ಕ್ರೀಮ್ ಪತ್ತೆಯಾಗಿದೆ. ಫೆಬ್ರವರಿಯಲ್ಲೇ ಅವಧಿ ಮುಗಿದಿದ್ದ ಕ್ರೀಮ್‌ ಅನ್ನು ಅಡುಗೆಗೆ ಬಳಸಲಾಗುತ್ತಿತ್ತು ಎಂದು ಅಧಿಕಾರಿಗಳ ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ.

ಇದಲ್ಲದೆ ಬೇಬಿ ಕಾರ್ನ್ ಪ್ಯಾಕೆಟ್‌ಗಳಲ್ಲಿ ಕೀಟಗಳು ಪತ್ತೆಯಾಗಿದ್ದು, ಅವಧಿ ಮೀರಿ ಗಬ್ಬೆದ್ದು ನಾರುತ್ತಿದ್ದ ಮಶ್ರೂಮ್‌ಗಳನ್ನು ಕೂಡ ಶೇಖರಿಸಿಟ್ಟಿರುವುದು ಕಂಡುಬಂದಿದೆ.

ಪಬ್‌ನ ಫ್ರೀಜರ್ ಪರಿಶೀಲಿಸಿದ ಅಧಿಕಾರಿಗಳಿಗೆ ರಾಶಿಗಟ್ಟಲೆ ಕೊಳೆತು ನಾರುತ್ತಿದ್ದ ಆಹಾರ ಪದಾರ್ಥಗಳು ಕಂಡುಬಂದಿವೆ. ಕೆಲವು ಆಹಾರ ಪದಾರ್ಥಗಳ ಸಂಗ್ರಹಣಾ ವಿಧಾನ ಹಾಗೂ ಗುಣಮಟ್ಟದ ಬಗ್ಗೆಯೂ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚೀಸ್ ಪ್ಯಾಕೆಟ್‌ನಲ್ಲಿ ಸತ್ತ ಜಿರಳೆ ಪತ್ತೆ

ಪರಿಶೀಲನೆ ವೇಳೆ ಚೀಸ್ ಪ್ಯಾಕೆಟ್‌ನಲ್ಲಿ ಸತ್ತ ಜಿರಳೆ ಪತ್ತೆಯಾಗಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಮಶ್ರೂಮ್‌ಗಳಲ್ಲಿ ಫಂಗಸ್ ಕಾಣಿಸಿಕೊಂಡಿದ್ದು, ಚೈನೀಸ್ ಅಡುಗೆಗೆ ಬಳಸುತ್ತಿದ್ದ ಕೆಲವು ತರಕಾರಿಗಳ ಗುಣಮಟ್ಟವೂ ಕಳಪೆಯಾಗಿರುವುದು ಪತ್ತೆಯಾಗಿದೆ.

ಆಹಾರ ಪದಾರ್ಥಗಳ ಮಾದರಿಗಳನ್ನು ಅಧಿಕಾರಿಗಳು ಸಂಗ್ರಹಿಸಿಕೊಂಡಿದ್ದು, ಹೆಚ್ಚಿನ ಪರಿಶೀಲನೆಗಾಗಿ ಕಳುಹಿಸಿದ್ದಾರೆ. ಜೊತೆಗೆ ಪಬ್‌ನ ಕಿಚನ್‌ಗೆ ಅಧಿಕಾರಿಗಳು ಬೀಗ ಹಾಕಿ, ಆಹಾರ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಕಳಪೆ ಆಹಾರ ಪತ್ತೆ ಹಿನ್ನೆಲೆ ಪಬ್‌ಗೆ ಬೀಗ

ಬಳಕೆಗೆ ಯೋಗ್ಯವಲ್ಲದ ಹಾಗೂ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಅಡುಗೆಗೆ ಬಳಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ Peg & Bottles Pub ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಕಿಚನ್‌ಗೆ ಲಾಕ್ ಮಾಡಿರುವ ಅಧಿಕಾರಿಗಳು, ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸದಂತೆ ಸಂಸ್ಥೆಯ ಆಡಳಿತಕ್ಕೆ ಸೂಚನೆ ನೀಡಿದ್ದಾರೆ.

ನಗರದ ಹೋಟೆಲ್‌ಗಳು ಮತ್ತು ಪಬ್‌ಗಳಲ್ಲಿ ಆಹಾರ ಪದಾರ್ಥಗಳ ಗುಣಮಟ್ಟ, ಅವಧಿ, ಸಂಗ್ರಹಣೆ ಹಾಗೂ ಅಡುಗೆಮನೆಯ ಸ್ವಚ್ಛತೆಯನ್ನು ಕಡ್ಡಾಯವಾಗಿ ಕಾಪಾಡಬೇಕು ಎಂದು ಆಹಾರ ಸುರಕ್ಷತಾ ಇಲಾಖೆ ಎಚ್ಚರಿಕೆ ನೀಡಿದೆ.

ಮುಂದಿನ ದಿನಗಳಲ್ಲಿಯೂ ನಗರದ ವಿವಿಧ ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಪಬ್‌ಗಳಲ್ಲಿ ತಪಾಸಣೆ ಮುಂದುವರಿಯಲಿದ್ದು, ಕಳಪೆ ಅಥವಾ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ನೀಡುವ ಸಂಸ್ಥೆಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.