ಕಾಂಗ್ರೆಸ್‌ನಲ್ಲಿ ಸಾಫ್ಟ್ ಹಿಂದುತ್ವ ಅಜೆಂಡಾ ಸೆಟ್ ಮಾಡ್ತಾರಾ ಡಿಕೆಶಿ..?

ಬಿಜೆಪಿ ಹಿಂದೂ ಕಾರ್ಡ್‌ಗೆ ಡಿಕೆಶಿ ಕೌಂಟರ್ ತಂತ್ರ..? ಡಿಕೆಶಿ ಟೆಂಪಲ್​ ರನ್​ ಕಂಪ್ಲೀಟ್​ ಡಿಟೈಲ್ಸ್​.

ರಾಜಕೀಯLATEST NEWS

S3 Media House

6/16/20261 min read

ಕರ್ನಾಟಕ ರಾಜಕೀಯದಲ್ಲಿ ಹೊಸ ಅಧ್ಯಾಯ ಬರೆಯಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರಾ ಎಂಬ ಚರ್ಚೆ ಜೋರಾಗಿದೆ. ಮುಂದಿನ 2028ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಈಗಿನಿಂದಲೇ ರಾಜಕೀಯ ತಯಾರಿ ಆರಂಭಿಸಿರುವ ಡಿಕೆಶಿ, ಕಾಂಗ್ರೆಸ್‌ನಲ್ಲಿ ಹೊಸ ರಾಜಕೀಯ ಸಮೀಕರಣ ಕಟ್ಟಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದ ವಿವಿಧ ಪ್ರಮುಖ ಜಾತಿಗಳ ಮಠಾಧೀಶರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಿರುವ ಡಿಕೆಶಿ, ಧಾರ್ಮಿಕ ಕೇಂದ್ರಗಳ ಭೇಟಿ ಹಾಗೂ ಮಠಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮಠಾಧೀಶರ ಆಶೀರ್ವಾದ ಮತ್ತು ಜನರ ವಿಶ್ವಾಸ ಎರಡನ್ನೂ ಗಳಿಸಿದರೆ ರಾಜಕೀಯವಾಗಿ ಮತ್ತಷ್ಟು ಬಲ ಸಿಗಲಿದೆ ಎಂಬ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲೂ ಹಲವು ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದು ಗಮನ ಸೆಳೆದಿತ್ತು. ನಂತರವೂ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಡಿಕೆಶಿ, ಸಾಂಪ್ರದಾಯಿಕ ಧಾರ್ಮಿಕ ಚಟುವಟಿಕೆಗಳ ಮೂಲಕ ಹೊಸ ರಾಜಕೀಯ ಸಂದೇಶ ರವಾನಿಸುತ್ತಿದ್ದಾರೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಇದೀಗ ಜೂನ್ 18 ಮತ್ತು 19ರಂದು ಆಂಧ್ರಪ್ರದೇಶದ ತಿರುಪತಿಗೆ ಭೇಟಿ ನೀಡಲು ಮುಖ್ಯಮಂತ್ರಿ ಸಜ್ಜಾಗಿದ್ದಾರೆ. ಪರಿಷತ್ ಚುನಾವಣೆ ಬಳಿಕ ತಿರುಪತಿಗೆ ತೆರಳಲಿರುವ ಅವರು, ರಾತ್ರಿ ಅಲ್ಲೇ ವಾಸ್ತವ್ಯ ಹೂಡಿ, ಬೆಳಗ್ಗೆ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಬೆಂಗಳೂರಿಗೆ ಮರಳಲಿದ್ದಾರೆ ಎನ್ನಲಾಗಿದೆ. ಕುಟುಂಬ ಸಮೇತರಾಗಿ ದರ್ಶನ ಪಡೆಯುವ ಸಾಧ್ಯತೆಯೂ ಇದೆ.

ಮುಖ್ಯಮಂತ್ರಿಯಾಗುವ ಮೊದಲುವೂ ತಿರುಪತಿ ದರ್ಶನ ಪಡೆದಿದ್ದ ಡಿಕೆಶಿ, ಇದೀಗ ಸಿಎಂ ಆದ ಬಳಿಕ ಮೊದಲ ಬಾರಿಗೆ ತಿಮ್ಮಪ್ಪನ ಸನ್ನಿಧಿಗೆ ತೆರಳುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಒಂದೆಡೆ ಕಾಂಗ್ರೆಸ್ ಪಕ್ಷವನ್ನು ಹಿಂದೂ ವಿರೋಧಿ ಎಂದು ಟೀಕಿಸುವ ವಿಪಕ್ಷಗಳಿಗೆ ಉತ್ತರ ನೀಡುವ ಪ್ರಯತ್ನ, ಮತ್ತೊಂದೆಡೆ ಸಾಂಪ್ರದಾಯಿಕ ಮತದಾರರನ್ನು ಸೆಳೆಯುವ ರಾಜಕೀಯ ತಂತ್ರ—ಈ ಎರಡರ ನಡುವೆ ಡಿಕೆಶಿಯ ಹೊಸ ನಡೆ ಗಮನ ಸೆಳೆಯುತ್ತಿದೆ. 2028ರ ಅಖಾಡಕ್ಕೆ ಈಗಿನಿಂದಲೇ ಭದ್ರ ಅಡಿಪಾಯ ಹಾಕುವ ಪ್ರಯತ್ನವೇ ಇದು ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.