ಹೋಟೆಲ್‌, ಪಬ್‌–ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ ಹೊಸ ಮಾರ್ಗಸೂಚಿ: ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ

ಹೋಟೆಲ್‌, ಪಬ್‌, ಬಾರ್‌ ಆ್ಯಂಡ್ ರೆಸ್ಟೋರೆಂಟ್‌ಗಳ ಅಡುಗೆಮನೆಗಳಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ಹೊಸ ಮಾರ್ಗಸೂಚಿ

LATEST NEWSಬೆಂಗಳೂರು

S3 Media House

8/12/20261 min read

ಬೆಂಗಳೂರು:ನಗರದ ಹೋಟೆಲ್‌, ಪಬ್‌, ಬಾರ್‌ ಆ್ಯಂಡ್ ರೆಸ್ಟೋರೆಂಟ್‌ಗಳ ಅಡುಗೆಮನೆಗಳಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರಿನ ಹಲವು ಸ್ಟಾರ್‌ ಹೋಟೆಲ್‌ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಈ ವೇಳೆ ಅವಧಿ ಮೀರಿದ ಆಹಾರ ಪದಾರ್ಥಗಳು, ಕೊಳೆತ ತರಕಾರಿ, ಹಾಳಾದ ಮಾಂಸ ಸೇರಿದಂತೆ ಹಲವು ಅಕ್ರಮಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ದಾಳಿ ವೇಳೆ ಕೆಲವು ಸ್ಟಾರ್‌ ಹೋಟೆಲ್‌ಗಳ ಕಿಚನ್‌ಗಳಲ್ಲೇ ಅವಧಿ ಮೀರಿದ ಆಹಾರ ಪದಾರ್ಥಗಳು, ಫಂಗಸ್‌ ಹಿಡಿದ ತರಕಾರಿಗಳು, ಹಾಳಾದ ಮಾಂಸ ಹಾಗೂ ಹಾಲಿನ ಉತ್ಪನ್ನಗಳು ಪತ್ತೆಯಾಗಿವೆ ಎನ್ನಲಾಗಿದೆ. ಆಹಾರವನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸದೆ ಇರುವುದು ಹಾಗೂ ಕಚ್ಚಾ ಮತ್ತು ಬೇಯಿಸಿದ ಆಹಾರವನ್ನು ಒಟ್ಟಿಗೆ ಇಡುವುದು ಕೂಡ ಅಧಿಕಾರಿಗಳ ಗಮನಕ್ಕೆ ಬಂದಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹೋಟೆಲ್‌, ಪಬ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳು ಕಡ್ಡಾಯವಾಗಿ ಪಾಲಿಸಬೇಕಾದ ಹಲವು ನಿಯಮಗಳನ್ನು ಇಲಾಖೆ ಸೂಚಿಸಿದೆ.

ಮಾಂಸಾಹಾರ ಸಂಗ್ರಹಣೆಗೆ 4°C ತಾಪಮಾನ ಕಡ್ಡಾಯ

ಹೊಸ ಮಾರ್ಗಸೂಚಿಯ ಪ್ರಕಾರ ಮಾಂಸಾಹಾರವನ್ನು 4°C ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಬೇಕು. ಶೀತ ಆಹಾರವನ್ನು 5°C ತಾಪಮಾನದಲ್ಲಿ ಹಾಗೂ ಫ್ರೋಜನ್‌ ಆಹಾರವನ್ನು -18°C ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸುವಂತೆ ಸೂಚಿಸಲಾಗಿದೆ.

ವೆಜ್ ಆಹಾರವನ್ನು 65°C ಹಾಗೂ ನಾನ್‌ವೆಜ್ ಆಹಾರವನ್ನು 70°C ತಾಪಮಾನದಲ್ಲಿ ಇರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ತಯಾರಿಸಿದ ಆಹಾರವನ್ನು ಮತ್ತೆ ಬಿಸಿ ಮಾಡುವ ಸಂದರ್ಭದಲ್ಲಿ ಕನಿಷ್ಠ 75°C ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನ ಬಳಸಬೇಕು ಎಂದು ಸೂಚಿಸಲಾಗಿದೆ.

ಕಚ್ಚಾ ಮತ್ತು ಬೇಯಿಸಿದ ಆಹಾರ ಪ್ರತ್ಯೇಕವಾಗಿರಬೇಕು

ಕಚ್ಚಾ ಆಹಾರ, ಅರೆಬೆಂದ ಆಹಾರ ಹಾಗೂ ಸಂಪೂರ್ಣವಾಗಿ ಬೇಯಿಸಿದ ಆಹಾರವನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದು ಕಡ್ಡಾಯವಾಗಿದೆ. ಅದೇ ರೀತಿ ವೆಜ್‌ ಮತ್ತು ನಾನ್‌ವೆಜ್‌ ಆಹಾರಕ್ಕೆ ಪ್ರತ್ಯೇಕ ಸಂಗ್ರಹಣೆ ಹಾಗೂ ಪ್ರತ್ಯೇಕ ನಿರ್ವಹಣಾ ವ್ಯವಸ್ಥೆ ಹೊಂದಿರಬೇಕು.

ಆಹಾರ ತಯಾರಿಕೆಯಲ್ಲಿ ಬಳಸುವ ಎಣ್ಣೆಯ ಗುಣಮಟ್ಟದ ಬಗ್ಗೆಯೂ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. 25% TPC ಮೀರದ ಎಣ್ಣೆಯನ್ನು ಮಾತ್ರ ಆಹಾರ ತಯಾರಿಕೆಗೆ ಬಳಸುವಂತೆ ಸೂಚಿಸಲಾಗಿದೆ.

FSSAI ಪ್ರಮಾಣಪತ್ರ ಪ್ರದರ್ಶನ ಕಡ್ಡಾಯ

ಹೋಟೆಲ್‌ಗಳು ಮತ್ತು ಆಹಾರ ಸೇವಾ ಸಂಸ್ಥೆಗಳು FSSAI ಅಂಗೀಕೃತ ಪ್ರಮಾಣಪತ್ರವನ್ನು ಗ್ರಾಹಕರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ. ಆಹಾರದ ಗುಣಮಟ್ಟ, ಸಂಗ್ರಹಣೆ ಮತ್ತು ಅಡುಗೆಮನೆಯ ಸ್ವಚ್ಛತೆಯನ್ನು ಕಾಪಾಡುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ನಿಯಮಗಳನ್ನು ಉಲ್ಲಂಘಿಸುವ ಹೋಟೆಲ್‌, ಪಬ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಗ್ರಾಹಕರ ಆರೋಗ್ಯಕ್ಕೆ ಆದ್ಯತೆ

ಸ್ಟಾರ್‌ ಹೋಟೆಲ್‌ಗಳಂತಹ ಪ್ರತಿಷ್ಠಿತ ಆಹಾರ ಮಳಿಗೆಗಳಲ್ಲಿಯೇ ಅವಧಿ ಮೀರಿದ ಆಹಾರ, ಫಂಗಸ್‌ ಹಿಡಿದ ತರಕಾರಿ, ಹಾಳಾದ ಮಾಂಸ ಮತ್ತು ಹಾಲಿನ ಉತ್ಪನ್ನಗಳು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಆಹಾರ ಸೇವಿಸುವ ಗ್ರಾಹಕರ ಆರೋಗ್ಯದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಉಂಟಾಗದಂತೆ ಆಹಾರ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಲಾಖೆ ಸೂಚಿಸಿದೆ. ಮುಂದಿನ ದಿನಗಳಲ್ಲೂ ನಗರದ ವಿವಿಧ ಹೋಟೆಲ್‌, ಪಬ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳ ಮೇಲೆ ತಪಾಸಣೆ ಮುಂದುವರಿಯುವ ಸಾಧ್ಯತೆ ಇದ್ದು, ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.