ಬೂದಿಗೆರೆಯಲ್ಲಿ ನಾಯಿಕೊಡೆಯಂತೆ ತಲೆ ಎತ್ತುತ್ತಿರುವ ಅನಧಿಕೃತ ಹೋರ್ಡಿಂಗ್‌ಗಳು
ಕ್ರಮ ಕೈಗೊಳ್ಳಲು ಅಧಿಕಾರಿಗಳ ನಿರ್ಲಕ್ಷ್ಯ; ಆತಂಕದಲ್ಲಿ ವಾಹನ ಸವಾರರು ಮತ್ತು ಸಾರ್ವಜನಿಕರು
ಸಾರ್ವಜನಿಕ ಸಮಸ್ಯೆಗಳುLATEST NEWSಬೆಂಗಳೂರು ಗ್ರಾಮಾಂತರ
S3 Media House
7/10/20261 min read


ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನಧಿಕೃತ ಬೃಹತ್ ಜಾಹೀರಾತು ಫಲಕಗಳ (ಹೋರ್ಡಿಂಗ್‌ಗಳ) ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರ ಸುರಕ್ಷತೆ ಕುರಿತು ಗಂಭೀರ ಆತಂಕ ಮೂಡಿಸಿದೆ.
ರಸ್ತೆ ಹಾಗೂ ಹೆದ್ದಾರಿಗಳ ಪಕ್ಕದಲ್ಲಿ ಅಳವಡಿಸಲಾಗಿರುವ ಈ ಬೃಹತ್ ಹೋರ್ಡಿಂಗ್‌ಗಳು ಗಾಳಿ ಮತ್ತು ಮಳೆಗೆ ಕುಸಿಯುವ ಭೀತಿ ಎದುರಿಸುತ್ತಿದ್ದು, ಪ್ರತಿನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಜೀವದ ಹಂಗು ತೊರೆದು ಪ್ರಯಾಣಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಈ ಬಾರಿ ಆಷಾಢ ಮಾಸಕ್ಕೂ ಮುನ್ನವೇ ಗಾಳಿಯ ವೇಗ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಹೋರ್ಡಿಂಗ್‌ಗಳು ಉರುಳಿ ಬೀಳುವ ಸಾಧ್ಯತೆಗಳ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹೊರವಲಯದಲ್ಲಿ ಬೃಹತ್ ಹೋರ್ಡಿಂಗ್ ಗಾಳಿಯ ಅಬ್ಬರಕ್ಕೆ ವಾಹನಗಳ ಮೇಲೆ ಉರುಳಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ರಾಜ್ಯದ ವಿವಿಧ ಭಾಗಗಳಲ್ಲೂ ಇಂತಹ ಘಟನೆಗಳು ವರದಿಯಾಗಿದ್ದು, ಕೆಲವು ಕಡೆಗಳಲ್ಲಿ ಪ್ರಾಣಹಾನಿಯೂ ಸಂಭವಿಸಿರುವ ಉದಾಹರಣೆಗಳಿವೆ.
ಇಷ್ಟೆಲ್ಲಾ ಘಟನೆಗಳ ನಡುವೆಯೂ ಕಂದಾಯ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ನಿಯಮ ಉಲ್ಲಂಘಿಸಿ ಹೋರ್ಡಿಂಗ್ ಅಳವಡಿಕೆ?
ರಸ್ತೆ ಅಥವಾ ಹೆದ್ದಾರಿ ಪಕ್ಕದಲ್ಲಿ ಬೃಹತ್ ಹೋರ್ಡಿಂಗ್‌ಗಳನ್ನು ಅಳವಡಿಸಲು ಸಂಬಂಧಪಟ್ಟ ಇಲಾಖೆಗಳ ಅನುಮತಿ ಹಾಗೂ ಸ್ಥಳೀಯ ಪ್ರಾಧಿಕಾರಗಳ ಪರವಾನಗಿ ಅಗತ್ಯವಿದೆ. ಆದರೆ ಬೂದಿಗೆರೆ ಪ್ರದೇಶದಲ್ಲಿರುವ ಅನೇಕ ಹೋರ್ಡಿಂಗ್‌ಗಳು ಅಗತ್ಯ ಅನುಮತಿ ಮತ್ತು ನಿಯಮಾವಳಿಗಳನ್ನು ಪಾಲಿಸದೆ ಸ್ಥಾಪಿಸಲಾಗಿವೆ ಎಂಬ ಆರೋಪಗಳು ಕೇಳಿಬಂದಿವೆ.
ಕೆಲವು ಹೋರ್ಡಿಂಗ್‌ಗಳಿಗೆ ಗ್ರಾಮ ಪಂಚಾಯಿತಿಯಿಂದ ಅಕ್ರಮವಾಗಿ ಪರವಾನಗಿ ನೀಡಲಾಗಿದೆ ಎಂಬ ಆರೋಪವನ್ನೂ ಸ್ಥಳೀಯರು ಮಾಡಿದ್ದಾರೆ.
ಕಂದಾಯ ಇಲಾಖೆಯ ವಿರುದ್ಧ ನಿರ್ಲಕ್ಷ್ಯದ ಆರೋಪ
ಹೆದ್ದಾರಿ ಹಾಗೂ ರಸ್ತೆ ಪಕ್ಕದ ಕೃಷಿ ಜಮೀನುಗಳು ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ, ಅನಧಿಕೃತ ಹೋರ್ಡಿಂಗ್‌ಗಳ ವಿರುದ್ಧ ಕ್ರಮ ಕೈಗೊಳ್ಳುವ ಜವಾಬ್ದಾರಿ ಇಲಾಖೆಯ ಮೇಲಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಅಕ್ರಮವನ್ನು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬೂದಿಗೆರೆ ವೃತ್ತದ ಗ್ರಾಮ ಲೆಕ್ಕಾಧಿಕಾರಿ, ಅನಧಿಕೃತ ಹೋರ್ಡಿಂಗ್‌ಗಳ ಕುರಿತು ಈಗಾಗಲೇ ಉಪತಹಸೀಲ್ದಾರ್ ಅವರಿಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ ಕೇವಲ ವರದಿ ಸಲ್ಲಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಯಾವುದೇ ಅವಘಡ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡು ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅನಧಿಕೃತ ಹೋರ್ಡಿಂಗ್‌ಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಸಂಭವಿಸಬಹುದಾದ ಅವಘಡಗಳಿಗೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.


