"ಸುಳ್ಳು ಸುದ್ದಿ ಪ್ರಸಾರ ಮಾಡಬೇಡಿ".. ಮಾಧ್ಯಮಗಳಿಗೆ ಸಿಎಂ ಡಿಕೆಶಿ ನೇರ ಎಚ್ಚರಿಕೆ
"ನಾನು ತಪ್ಪು ಮಾಡಿದರೆ ಬಹಿರಂಗಪಡಿಸಿ. ಆದರೆ ಸುಳ್ಳು ಸುದ್ದಿಗಳನ್ನು ಪ್ರಕಟಿಸಬೇಡಿ, ಪ್ರಸಾರ ಮಾಡಬೇಡಿ" ಎಂದು ಮಾಧ್ಯಮಗಳಿಗೆ ಸಿಎಂ ಡಿ.ಕೆ.ಶಿವಕುಮಾರ್ ವಾರ್ನಿಂಗ್.
ರಾಜಕೀಯLATEST NEWS
7/1/20261 min read


ಪತ್ರಿಕಾ ವೃತ್ತಿಯಲ್ಲಿ ನಿರ್ಭೀತತೆ, ತತ್ವಬದ್ಧತೆ ಮತ್ತು ನೈತಿಕತೆ ಅತ್ಯಗತ್ಯ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇಂದಿನ ಸಂದರ್ಭದಲ್ಲಿ ನಿರ್ಭೀತಿಯ ಪತ್ರಿಕೋದ್ಯಮ ಅತ್ಯಂತ ಸವಾಲಿನ ಕೆಲಸವಾಗಿದೆ. ಪತ್ರಕರ್ತರು ವೃತ್ತಿಯ ತತ್ವ, ನೈತಿಕತೆ ಹಾಗೂ ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿದರೆ ಸಮಾಜಕ್ಕೆ ಒಳಿತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಫೇಕ್ ನ್ಯೂಸ್‌ನಿಂದ ಪತ್ರಿಕಾ ವೃತ್ತಿ ಹೊರಬರಬೇಕಿದೆ ಎಂದು ಹೇಳಿದ ಸಿಎಂ, ತಾವು ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ತೆರಳಿದ್ದ ವೇಳೆ, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೆಲವು ಟಿವಿ ವಾಹಿನಿಗಳು ಪ್ರಸಾರ ಮಾಡಿದ್ದು ಸಂಪೂರ್ಣ ಸುಳ್ಳು ಸುದ್ದಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೇಕೆದಾಟು ಪಾದಯಾತ್ರೆ ವೇಳೆ ನಡೆದ ಘಟನೆಯನ್ನು ಕೂಡ ತಪ್ಪಾಗಿ ಬಿಂಬಿಸಿ, ಜನರಿಗೆ ತಪ್ಪು ಸಂದೇಶ ನೀಡುವ ಪ್ರಯತ್ನ ಮಾಡಲಾಗಿತ್ತು ಎಂದು ಆರೋಪಿಸಿದರು.
"ನಾನು ತಪ್ಪು ಮಾಡಿದರೆ ಅದನ್ನು ಬಹಿರಂಗಪಡಿಸಿ. ಆದರೆ ಸುಳ್ಳು ಸುದ್ದಿಗಳನ್ನು ಪ್ರಕಟಿಸಬೇಡಿ, ಪ್ರಸಾರ ಮಾಡಬೇಡಿ" ಎಂದು ಮಾಧ್ಯಮಗಳಿಗೆ ಮನವಿ ಮಾಡಿದ ಅವರು, ಸುದ್ದಿ ಪ್ರಕಟವಾಗುವವರೆಗೆ ಅದು ಪತ್ರಕರ್ತರದ್ದಾಗಿರುತ್ತದೆ. ಪ್ರಕಟವಾದ ಬಳಿಕ ಅದು ಸಮಾಜದ ಆಸ್ತಿಯಾಗುವುದರಿಂದ ಪ್ರತಿಯೊಂದು ಸುದ್ದಿಯಲ್ಲೂ ಸತ್ಯ ಮತ್ತು ಪ್ರಾಮಾಣಿಕತೆ ಇರಬೇಕು ಎಂದು ಹೇಳಿದರು.
ಮಹಾತ್ಮ ಗಾಂಧಿ ಸೇರಿದಂತೆ ಅನೇಕ ಮಹನೀಯರು ಪತ್ರಕರ್ತರಾಗಿ ಪತ್ರಿಕಾ ವೃತ್ತಿಯ ಘನತೆಯನ್ನು ಹೆಚ್ಚಿಸಿದ್ದಾರೆ. ಆ ಮೌಲ್ಯಯುತ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವಂತೆ ಮುಖ್ಯಮಂತ್ರಿ ಕರೆ ನೀಡಿದರು.




