ದೇವನಹಳ್ಳಿ ತಾಲ್ಲೂಕಿನಲ್ಲಿ ಆಕ್ಟೀವ್ ಆಗಿದ್ದಾರೆ ಮಣ್ಣು ಕಳ್ಳರು!
LATEST NEWSಬೆಂಗಳೂರು ಗ್ರಾಮಾಂತರಅಪರಾಧ
9/8/20261 min read


ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕೆರೆಗಳ ಅಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳು ತರುತ್ತಿದ್ದು, ಸಾವಿರಾರು ಕೋಟಿ ಅನುದಾನ ಸಹ ಮೀಸಲಿರಿಸುತ್ತಿದೆ. ಆದರೆ ಸ್ಥಳೀಯ ಅಧಿಕಾರಿಗಳು ಮಾತ್ರ ಕೆರೆಗಳನ್ನು ಸಂರಕ್ಷಿಸುವಲ್ಲಿ ವಿಫಲರಾಗಿದ್ದಾರೆ. ಅನಧಿಕೃತವಾಗಿ ಕೆರೆಯ ಒಡಲನ್ನು ಬಗೆಯುತ್ತಿರುವಂತಹ ಕದೀಮರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಣ್ಣ ಮುಂದೆಯೇ ಅಕ್ರಮ ನಡೆಯುತ್ತಿದ್ದರೂ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಹಲವು ಕೆರೆಗಳಲ್ಲಿ ಮಣ್ಣು ಕಳ್ಳರು ಅನಧಿಕೃತವಾಗಿ ಕೆರೆಯಲ್ಲಿ ಮಣ್ಣನ್ನು ಕದಿಯುತ್ತಿದ್ದಾರೆ. ಆದರೆ ಕ್ರಮ ಕೈಗೊಳ್ಳಬೇಕಾದ ಕಂದಾಯ ಇಲಾಖೆ, ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮಾತ್ರ ತಮ್ಮ ಬೇಜವಬ್ದಾರಿಯನ್ನು ಪ್ರದರ್ಶಿಸುತ್ತಿದ್ದಾರೆ.
ಇದಕ್ಕೆ ಪ್ರತ್ಯಕ್ಷ ನಿದರ್ಶನವಾಗಿ ನಿಂತಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆ,ದೇವನಹಳ್ಳಿ ತಾಲ್ಲೂಕಿ ಸೊಮತ್ತನಹಳ್ಳಿ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಕದಿಯುತ್ತಿರುವುದು. ಹಲವು ದಿನಗಳಿಂದ ನೂರಾರು ಟಿಪ್ಪರ್ ಲಾರಿಗಳಷ್ಟು ಲೋಡ್ ಮಣ್ಣು ಇಲ್ಲಿಂದ ಸಾಗಾಟವಾಗಿದ್ದರು ಸಹ ಅಧಿಕಾರಿಗಳಿಗೆ ಮಾತ್ರ ಇದರ ಬಗ್ಗೆ ಗೊತ್ತೇ ಇಲ್ಲವಂತೆ. ಇದನ್ನ ಗಮನಿಸಬೇಕಾಗಿರುವ ಗ್ರಾಮ ಸಹಾಯಕ, ಗ್ರಾಮ ಲೆಕ್ಕಾಧಿಕಾರಿ ಹಾಗೂ ರಾಜಸ್ವ ನಿರೀಕ್ಷಕರು ಕೇಂದ್ರ ಸ್ಥಾನದಲ್ಲಿದ್ದಾರೋ ಅಥವಾ ವಿದೇಶಕ್ಕೆ ಪ್ರವಾಸ ಹೊರಟಿದ್ದಾರೋ ಎಂಬ ಅನುಮಾನ ಕಾಡುತ್ತಿದೆ.
ಉಸ್ತುವಾರಿ ಸಚಿವರು ಮಾತ್ರ ಗಂಟೆಗಟ್ಟಲೇ ಭಾಷಣ ಮಾಡಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು ಎಂದು ಹೇಳುತ್ತಿದ್ದಾರೆ. ಆದರೆ ಇಲ್ಲಿ ಯಾವು ಅಧಿಕಾರಿ ಕೇಂದ್ರ ಸ್ಥಾನದಲ್ಲಿದ್ದಾರೆ ಎಂದು ಸನ್ಮಾನ್ಯ ಮುನಿಯಪ್ಪನವರು ತಿಳಿದುಕೊಂಡು ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಇನ್ನು ಕೆರೆಯ ಒಡೆಲಿಗೆ ಕನ್ನ ಹಾಕುತ್ತಿರುವ ಕದೀಮರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ.


