ಮಲೂರು ಅಕ್ರಮ ಭೂ ಮಂಜೂರಾತಿ : ಶಾಸಕ ನಂಜೇಗೌಡ ಗುಡುಗು!
ರಾಜಕೀಯಅಪರಾಧ
S3 Media House
6/16/20261 min read


ಮಾಲೂರು ಅಕ್ರಮ ಭೂ ಮಂಜುರಾತಿ ಪ್ರಕರಣ ಇತ್ತೀಚೆಗೆ ರಾಜ್ಯ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿರುವ ಹಿನ್ನೆಲೆ, ಅಕ್ರಮ ಭೂ ದಾಖಲೆಗಳನ್ನು ಸೃಷ್ಟಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಾಸಕ ಕೆ.ವೈ. ನಂಜೇಗೌಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಕಡೆಯವರಾಗಲಿ ಅಥವಾ ಬೇರೆಯವರಾಗಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಅಕ್ರಮ ನಡೆದಿದೆ ಅಥವಾ ಇಲ್ಲ ಎಂಬುದನ್ನು ತೀರ್ಮಾನಿಸುವವರು ತನಿಖಾ ಅಧಿಕಾರಿಗಳು ಎಂದು ಹೇಳಿದ ಶಾಸಕ ನಂಜೇಗೌಡ, ಎಂತಹ ಪ್ರಭಾವಿ ವ್ಯಕ್ತಿಯಾಗಿದ್ದರೂ ತಪ್ಪಿತಸ್ಥರೆಂದು ಸಾಬೀತಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಅಕ್ರಮ ದಾಖಲೆಗಳ ಸೃಷ್ಟಿ ಕುರಿತು ಮಾಹಿತಿ ಬಂದಿರುವುದರಿಂದ ಸಂಪೂರ್ಣ ತನಿಖೆ ನಡೆಸಿ ಸತ್ಯಾಂಶ ಹೊರತರಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಹೇಳಿದರು.
ತಾವು ಎರಡು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿರುವ ಅವಧಿಯಲ್ಲಿ ಸರ್ಕಾರಿ ಜಮೀನುಗಳನ್ನು ಉಳಿಸಿದ್ದು, ಅಕ್ರಮ ಖಾತೆಗಳನ್ನು ರದ್ದುಪಡಿಸಿದ್ದೇನೆ ಎಂದು ತಿಳಿಸಿದರು.
ತಹಶೀಲ್ದಾರ್, ಶಿರಸ್ತೆದಾರ್, ಎಸ್‌ಡಿಎ ಸೇರಿದಂತೆ ಯಾವುದೇ ಅಧಿಕಾರಿ ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಅವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅನುಮಾನಾಸ್ಪದ ಪ್ರಕರಣಗಳನ್ನೆಲ್ಲ ತನಿಖೆಗೆ ಒಳಪಡಿಸಿ, ವರದಿ ಆಧಾರದ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಅಮಾನತು ಸೇರಿದಂತೆ ಕಾನೂನು ಕ್ರಮ ಜರುಗಿಸಬಹುದು ಎಂದರು.
ಮಾಲೂರು ತಾಲೂಕಿನಲ್ಲಿ ಅಕ್ರಮ ದಾಖಲೆಗಳ ಸೃಷ್ಟಿಗೆ ಸಂಬಂಧಿಸಿದಂತೆ ಒಂದು ತಂಡವೇ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದ್ದು, ತನಿಖೆಯಲ್ಲಿ ಸತ್ಯ ಹೊರಬಂದರೆ ಯಾರೇ ಆಗಿದ್ದರೂ ಕ್ರಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶಾಸಕ ನಂಜೇಗೌಡ ಎಚ್ಚರಿಕೆ ನೀಡಿದರು.
ಈ ಸಂಬಂಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.


