ಜುಲೈ ಮೊದಲ ವಾರದಲ್ಲೇ ಸಂಪುಟ ವಿಸ್ತರಣೆ? ರಾಜಕೀಯ ಚಟುವಟಿಕೆ ಜೋರು

ಸಚಿವ ಸ್ಥಾನಾಕಾಂಕ್ಷಿಗಳ ಸಂಖ್ಯೆ ಹೆಚ್ಚಳ – ಸಿಎಂಗೆ ಹೊಸ ತಲೆನೋವು!

LATEST NEWSರಾಜಕೀಯ

S3 Media House

6/23/20261 min read

ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಚರ್ಚೆ ಮತ್ತೆ ಜೋರಾಗಿದೆ. ಸಚಿವ ಸಂಪುಟ ವಿಸ್ತರಣೆಗೆ ಸರ್ಕಾರ ನಿರ್ಧಾರ ಕೈಗೊಂಡಿರುವ ಬೆನ್ನಲ್ಲೇ, ವಿವಿಧ ಸಮುದಾಯಗಳಿಂದ ತಮ್ಮ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಗಳು ಹೆಚ್ಚಾಗಿವೆ.

ಲಿಂಗಾಯತ ಸಮುದಾಯ ಹೆಚ್ಚುವರಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದು, ದಲಿತ ಬಲಗೈ ಸಮುದಾಯವೂ ಹೆಚ್ಚುವರಿ ಸ್ಥಾನಕ್ಕಾಗಿ ಮನವಿ ಮಾಡಿದೆ. ಎಡಗೈ ಸಮುದಾಯ ಮೂರು ಸಚಿವ ಸ್ಥಾನಗಳನ್ನು ನೀಡುವಂತೆ ಒತ್ತಡ ಹೇರಿದ್ದು, ರಾಜ್ಯದಲ್ಲಿ ತಮ್ಮ ಜನಸಂಖ್ಯೆ ಹೆಚ್ಚಿದೆ ಎಂಬ ಕಾರಣ ಮುಂದಿಟ್ಟಿದೆ.

ಅಲ್ಪಸಂಖ್ಯಾತ ಸಮುದಾಯವೂ ಮೂರು ಸಚಿವ ಸ್ಥಾನಗಳಿಗೆ ಬೇಡಿಕೆ ಸಲ್ಲಿಸಿದೆ. ಜೊತೆಗೆ ಹಲವು ಸಣ್ಣ ಸಮುದಾಯಗಳಿಂದಲೂ ತಮ್ಮ ಪ್ರತಿನಿಧಿಗಳಿಗೆ ಸಚಿವ ಸ್ಥಾನ ನೀಡುವಂತೆ ಲಾಬಿ ನಡೆಯುತ್ತಿದೆ. ಉಪ್ಪಾರ ಸಮುದಾಯದಿಂದ ಪುಟ್ಟರಂಗ ಶೆಟ್ಟಿ, ಬೋವಿ ಸಮುದಾಯದಿಂದ ತಂಗಡಗಿ, ನೇಕಾರ ಸಮುದಾಯದಿಂದ ಉಮಾಶ್ರೀ, ಯಾದವ ಸಮುದಾಯದಿಂದ ನಾಗರಾಜ್ ಯಾದವ್, ಲಂಬಾಣಿ ಸಮುದಾಯದಿಂದ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಕೇಳಿಬರುತ್ತಿದೆ.

ವಾಲ್ಮೀಕಿ ಸಮುದಾಯವೂ ಹೆಚ್ಚುವರಿ ಸಚಿವ ಸ್ಥಾನಕ್ಕಾಗಿ ಬೇಡಿಕೆ ಮುಂದಿಟ್ಟಿದೆ. ಇನ್ನೊಂದೆಡೆ, ಈ ಸಮುದಾಯವಾರು ಬೇಡಿಕೆಗಳಿಗೆ ರಾಜ್ಯದ ಹಿರಿಯ ನಾಯಕರು ಸದ್ಯ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ್ದಾರೆ.

ಇದರ ಮಧ್ಯೆ ಜಮೀರ್ ಅಹ್ಮದ್ ಖಾನ್ ಪರವೂ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ದೆಹಲಿಗೆ ತೆರಳುವ ಸಾಧ್ಯತೆ ಇದೆ.

ಜೂನ್ 27ರ ನಂತರ ಹೈಕಮಾಂಡ್ ಮಟ್ಟದಲ್ಲಿ ಮಹತ್ವದ ಚರ್ಚೆಗಳು ನಡೆಯುವ ನಿರೀಕ್ಷೆಯಿದ್ದು, ಜುಲೈ ಮೊದಲ ವಾರದಲ್ಲೇ ಸಚಿವ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಗಳಿವೆ. ಸಚಿವ ಸ್ಥಾನಾಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ವರಿಷ್ಠರಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಈ ಹಿನ್ನೆಲೆಯಲ್ಲಿ ಅನೇಕ ಶಾಸಕರು ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಒತ್ತಡ ಮುಂದುವರಿಸಿದ್ದಾರೆ. ಈಗ ಎಲ್ಲರ ಚಿತ್ತ ಸಚಿವ ಸಂಪುಟ ವಿಸ್ತರಣೆ ಯಾವಾಗ ಮತ್ತು ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದರತ್ತ ನೆಟ್ಟಿದೆ.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.