ಈ ಬಾರಿಯ ಮೈಸೂರು ದಸರಾ ಹೇಗಿರಲಿದೆ? ಇಲ್ಲಿದೆ ಓದಿ ಕಂಪ್ಲೀಟ್ ಡಿಟೈಲ್ಸ್!
ಮೈಸೂರು ದಸರಾದಲ್ಲಿ ನಡೆಯುತ್ತಾ ಕಂಬಳ?
LATEST NEWSಬೆಂಗಳೂರುಧರ್ಮ & ಸಂಸ್ಕೃತಿ
S3 Media House
7/10/20261 min read


ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪೂರ್ವಸಿದ್ಧತೆಗಳ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ವಿಧಾನಸೌಧದ ಕಾನ್ಫರೆನ್ಸ್ ಹಾಲ್‌ನಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.
ಸಭೆಯಲ್ಲಿ ಸಚಿವರಾದ ಯತೀಂದ್ರ ಸಿದ್ದರಾಮಯ್ಯ, ಹೆಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಹಾಗೂ ಸಂಸದ ಯದುವೀರ್ ಕೃಷ್ನದತ್ತ ಚಾಮರಾಜ್ ಒಡೆಯರ್, ಶಾಸಕರಾದ G. T. ದೇವೇಗೌಡ, ತನ್ವೀರ್ ಸೇಟ್ ಸೇರಿದಂತೆ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದರು.
ಸಭೆಯಲ್ಲಿ ಈ ಬಾರಿಯ ದಸರಾ ಮಹೋತ್ಸವದ ಅಂಗವಾಗಿ ಕಂಬಳ ಸ್ಪರ್ಧೆ ಆಯೋಜನೆ ಕುರಿತೂ ಚರ್ಚೆ ನಡೆಯಿತು. ಕಂಬಳ ಸಮಿತಿಯು ಅಕ್ಟೋಬರ್ 18 ಮತ್ತು 19ರಂದು ಎರಡು ದಿನಗಳ ಕಾಲ ಕಂಬಳ ಆಯೋಜಿಸಲು ಮನವಿ ಸಲ್ಲಿಸಿದ್ದು, ಇದಕ್ಕಾಗಿ ಪ್ರತ್ಯೇಕ ಅನುದಾನ ನೀಡುವಂತೆ ಸರ್ಕಾರವನ್ನು ಕೋರಿದೆ.
ಈ ಬಾರಿಯ ಮೈಸೂರು ದಸರಾ ಮಹೋತ್ಸವವನ್ನು ಅಕ್ಟೋಬರ್ 11ರಂದು ಉದ್ಘಾಟಿಸಲು ತೀರ್ಮಾನಿಸಲಾಗಿದ್ದು, ಉದ್ಘಾಟಕರನ್ನು ಆಯ್ಕೆ ಮಾಡುವ ಅಧಿಕಾರ ಮುಖ್ಯಮಂತ್ರಿಗಳಿಗೆ ನೀಡಲಾಗಿದೆ. ವಿಜಯದಶಮಿ ಅಂಗವಾಗಿ ಅಕ್ಟೋಬರ್ 21ರಂದು ಜಂಬೂಸವಾರಿ ನಡೆಯಲಿದ್ದು, ಮಧ್ಯಾಹ್ನ 4.10ಕ್ಕೆ ಮೀನಾ ಲಗ್ನದಲ್ಲಿ ಪುಷ್ಪಾರ್ಚನೆಯೊಂದಿಗೆ ಮೆರವಣಿಗೆಗೆ ಚಾಲನೆ ನೀಡುವ ಪ್ರಸ್ತಾವನೆ ಇದೆ.
ದಸರಾ ಮಹೋತ್ಸವದ ಅಂಗವಾಗಿ ಜುಲೈ 26ರಂದು ಗಜಪಯಣ ಆರಂಭವಾಗಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
2025-26ನೇ ಸಾಲಿನ ದಸರಾ ಆಚರಣೆಗೆ ₹45 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದ್ದು, 2026-27ನೇ ಸಾಲಿಗೆ ₹50 ಕೋಟಿ ಅನುದಾನ ನೀಡುವಂತೆ ಸರ್ಕಾರವನ್ನು ಕೋರಲಾಗಿದೆ. ಅಂತಿಮ ಅನುದಾನದ ನಿರ್ಧಾರವನ್ನು ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನುದಾನ ಹಂಚಿಕೆ ಪ್ರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹10 ಕೋಟಿ, ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ ₹10 ಕೋಟಿ ಹಾಗೂ ಅರಮನೆ ಮಂಡಳಿಯಿಂದ ₹5 ಕೋಟಿ ವೆಚ್ಚ ಭರಿಸುವ ಪ್ರಸ್ತಾವನೆ ಇದೆ. ಇದೇ ವೇಳೆ ಈ ಬಾರಿ ಒಟ್ಟು ಅನುದಾನವನ್ನು ಹೆಚ್ಚಿಸುವಂತೆ ಮನವಿ ಮಾಡಲಾಗಿದೆ. ದಸರಾ ಅಂಗವಾಗಿ ಪಂಜಿನ ಕವಾಯತು, ಏರ್ ಶೋ ಹಾಗೂ ಡ್ರೋನ್ ಶೋಗಳಿಗೆ ಅನುಮತಿ ನೀಡುವ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬಂದಿತು.
ಇದೇ ವೇಳೆ ಮಂಡ್ಯ, ಶ್ರೀರಂಗಪಟ್ಟಣ ಮತ್ತು ಚಾಮರಾಜನಗರದಲ್ಲೂ ದಸರಾ ಆಚರಣೆಗೆ ಪ್ರತ್ಯೇಕ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ದಸರಾ ಆಚರಣೆಗೆ ₹2 ಕೋಟಿ ಹಾಗೂ ಚಾಮರಾಜನಗರ ಜಿಲ್ಲೆಗೆ ₹2 ಕೋಟಿ ಅನುದಾನ ನೀಡುವಂತೆ ಸಂಬಂಧಿತ ಜನಪ್ರತಿನಿಧಿಗಳು ಸರ್ಕಾರವನ್ನು ಕೋರಿದ್ದಾರೆ.


