ಶೀಘ್ರ ನಿಮ್ಮ ಜೇಬು ಸೇರಲಿದೆ ಪ್ಲಾಸ್ಟಿಕ್ ನೋಟು!
ವಿಶೇಷ ವರದಿತಂತ್ರಜ್ಞಾನ
S3 Media House
6/5/20261 min read


ಹೆಚ್ಚು ಬಳಸಲಾಗುವ ಮತ್ತು ಬೇಗನೆ ಹಳೆಯದಾಗುವ 10 ರೂಪಾಯಿ ಮತ್ತು 20 ರೂಪಾಯಿ ರೀತಿಯ ಕಡಿಮೆ ಮುಖಬೆಲೆಯ ನೋಟುಗಳನ್ನು ಆರಂಭಿಕ ಪ್ರಯೋಗಕ್ಕೆ ಆಯ್ಕೆ ಮಾಡುವ ಸಾಧ್ಯತೆ!
ನೋಟು ಹರಿದು ಹೋಗುವುದು, ಗಲೀಜು ಆಗುವುದು ಸೇರಿದಂತೆ, ಕರೆನ್ಸಿಗೆ ಆಗುವ ಡ್ಯಾಮೇಜ್ ತಪ್ಪಿಸಲು ಪ್ಲಾಸ್ಟಿಕ್ ನೋಟು ತರಲು RBI ಚಿಂತನೆ ನಡೆಸಿದೆ. ಪಾಲಿಮರ್ ಅಥವಾ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸುವ ಬಗ್ಗೆ ಯೋಚಿಸುತ್ತಿದೆ. ಈ ನಿಟ್ಟಿನಲ್ಲಿ ಹೊಸ ಪೈಲಟ್ ಯೋಜನೆಯನ್ನು ಶೀಘ್ರದಲ್ಲೇ ಘೋಷಿಸುವ ನಿರೀಕ್ಷೆಯಿದೆ. ಹೆಚ್ಚು ಬಳಸಲಾಗುವ ಮತ್ತು ಬೇಗನೆ ಹಳೆಯದಾಗುವ 10 ರೂಪಾಯಿ ಮತ್ತು 20 ರೂಪಾಯಿ ರೀತಿಯ ಕಡಿಮೆ ಮುಖಬೆಲೆಯ ನೋಟುಗಳನ್ನು ಆರಂಭಿಕ ಪ್ರಯೋಗಕ್ಕೆ ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ತಜ್ಞರು ಹೇಳ್ತಿದ್ದಾರೆ.
ಕರೆನ್ಸಿ ಮುದ್ರಣ ವೆಚ್ಚದಲ್ಲಿ ತೀವ್ರ ಹೆಚ್ಚಳ ಮತ್ತು ಚಲಾವಣೆಯಲ್ಲಿರುವ ಹಳೆಯ ನೋಟುಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಲಿಮರ್ ನೋಟುಗಳನ್ನು ಚಲಾವಣೆಗೆ ತರುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ.
ನೋಟುಗಳನ್ನ ಮುದ್ರಿಸಲು ವೆಚ್ಚ
2025-26ರಲ್ಲಿ ನೋಟುಗಳನ್ನು ಮುದ್ರಿಸಲು ಆರ್ಬಿಐ ಸುಮಾರು 4,875 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಇದು 2024-25ರಲ್ಲಿ 6,373 ಕೋಟಿ ರೂಪಾಯಿಗಳಷ್ಟಿತ್ತು. ಸುಮಾರು 23.5 ಪ್ರತಿಶತದಷ್ಟು ಇಳಿಕೆಯನ್ನು ತೋರಿಸುತ್ತದೆ.
ಆದರೂ, ಕಳೆದ ಐದು ವರ್ಷಗಳ ದತ್ತಾಂಶವನ್ನು ತೆಗೆದುಕೊಂಡರೆ ಈ ವೆಚ್ಚವು ಏರಿಳಿತಗೊಂಡಿದೆ. ಇದು 2021-22ರಲ್ಲಿ 4,985 ಕೋಟಿ ರೂಪಾಯಿಗಳಷ್ಟಿತ್ತು. 2022-23ರಲ್ಲಿ 4,683 ಕೋಟಿ ರೂಪಾಯಿಗಳಿಗೆ ಇಳಿಕೆ ಕಂಡಿತ್ತು, ನಂತರ 2023-24ರಲ್ಲಿ 5,101 ಕೋಟಿ ರೂಪಾಯಿಗಳಿಗೆ ಏರಿಕೆ ಆಗಿತ್ತು. ಈ ವೆಚ್ಚವು 2024-25ರಲ್ಲಿ 6,373 ಕೋಟಿ ರೂಪಾಯಿಗಳಿಗೆ ಗಮನಾರ್ಹವಾಗಿ ಏರಿಕೆಯಾಗಿದ್ದು, ಕಳೆದ ಹಣಕಾಸು ವರ್ಷದಲ್ಲಿ ಅದು ಕಡಿಮೆಯಾಗಿದೆ. ಇದೇ ಕಾರಣಕ್ಕೆ ಪಾಲಿಮರ್ ನೋಟುಗಳ ಚಲಾವಣೆಗೆ RBI ಚಿಂತಿಸಿದೆ ಎನ್ನಲಾಗಿದೆ.
ಪಾಲಿಮರ್ ನೋಟುಗಳು ಎಂದರೇನು?
ಪಾಲಿಮರ್ ನೋಟುಗಳನ್ನು ಸಾಂಪ್ರದಾಯಿಕ ಕರೆನ್ಸಿಗೆ ಬಳಸುವ ಹತ್ತಿ ಆಧಾರಿತ ಕಾಗದಕ್ಕಿಂತ ತೆಳುವಾದ ಪ್ಲಾಸ್ಟಿಕ್ ವಸ್ತುವಿನಿಂದ ತಯಾರಿಸಲಾಗುತ್ತದೆ. ಪ್ಲಾಸ್ಟಿಕ್ ನೋಟುಗಳೆಂದು ಕರೆಯಲಾಗಿದ್ದರೂ ಅವು ಸಾಕಷ್ಟು ಹೊಂದಿಕೊಳ್ಳುವ ಮತ್ತು ಸಾಮಾನ್ಯ ನೋಟುಗಳಂತೆ ಮಡಚಬಹುದಾದ ಮತ್ತು ನಿರ್ವಹಿಸಬಹುದಾಗಿದೆ. ಇದಲ್ಲದೇ ಪಾಲಿಮರ್ ನೋಟುಗಳ ಮುಖ್ಯ ಪ್ರಯೋಜನವೆಂದರೆ ಅವುಗಳು ಹೆಚ್ಚು ಕಾಲ ಬಾಳಿಕೆ ಬರಬಹುದು. ಬೇಗನೇ ಕೊಳಕು, ತೇವಾಂಶ ಮತ್ತು ಹರಿದುಹೋಗುವಿಕೆಯನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿವೆ. ಇದು ಅವುಗಳನ್ನು ದೀರ್ಘಕಾಲದವರೆಗೆ ಚಲಾವಣೆಯಲ್ಲಿಡಲು ಅನುವು ಮಾಡಿಕೊಡುತ್ತದೆ. ಅಲ್ಲದೇ ಅವುಗಳನ್ನು ಪಾರದರ್ಶಕ ವಿಂಡೋ , ವಿಶೇಷ ಶಾಯಿ ಮತ್ತು ನಕಲಿ ವಿರೋಧಿ ಅಂಶಗಳಂತಹ ಸುಧಾರಿತ ಭದ್ರತಾ ವೈಶಿಷ್ಟ್ಯಗಳೊಂದಿಗೆ ಸಂಯೋಜಿಸಬಹುದಾಗಿದೆ. ಇದರಿಂದಾಗಿ ಅವುಗಳನ್ನು ನಕಲು ಮಾಡುವುದು ಹೆಚ್ಚು ಕಷ್ಟಕರವಾಗುತ್ತದೆ.
ಅನೇಕ ದೇಶಗಳು ಪಾಲಿಮರ್ ನೋಟುಗಳನ್ನು ಅಳವಡಿಸಿಕೊಂಡಿವೆ. ಏಕೆಂದರೆ ಅವು ಸಾಮಾನ್ಯವಾಗಿ ಹೆಚ್ಚು ಕಾಲ ಬಾಳಿಕೆ ಬರುತ್ತವೆ ಮತ್ತು ಬದಲಿ ವೆಚ್ಚವನ್ನ ಕಡಿಮೆ ಮಾಡುತ್ತವೆ. ಅದರಂತೆ, ಭೌಗೋಳಿಕ ಮತ್ತು ಹವಾಮಾನ ವೈವಿಧ್ಯತೆಯಿಂದಾಗಿ ಗುರುತಿಸಲಾದ ಐದು ನಗರಗಳಲ್ಲಿ ಕ್ಷೇತ್ರ ಪ್ರಯೋಗಗಳಿಗಾಗಿ 1 ಬಿಲಿಯನ್ 10 ರೂ.ಗಳ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಲು ನಿರ್ಧರಿಸಿದೆ.
ಮೊದಲ ಪಾಲಿಮರ್ ನೋಟುಗಳನ್ನ ಮುದ್ರಿಸಿದ ದೇಶ ಯಾವುದು?: 1988 ರಲ್ಲಿ ಆಸ್ಟ್ರೇಲಿಯಾ ಪಾಲಿಮರ್ ನೋಟುಗಳನ್ನು ಪರಿಚಯಿಸಿದ ಮೊದಲ ದೇಶವಾಗಿದೆ. ಅಂದಿನಿಂದ ಡಜನ್ ಗಟ್ಟಲೆ ದೇಶಗಳು ಪಾಲಿಮರ್ ನೋಟುಗಳನ್ನು ಪರಿಚಯಿಸಿವೆ. ಅವುಗಳಲ್ಲಿ ಹಲವಾರು ಸಂಪೂರ್ಣವಾಗಿ ಕಾಗದದಿಂದ ಪಾಲಿಮರ್ಗೆ ಬದಲಾಗಿವೆ.
ಕಾಗದಕ್ಕಿಂತ ಪ್ಲಾಸ್ಟಿಕ್ ಬೇಗ ಹಾಳಾಗುವುದಿಲ್ಲ. ಆದ್ದರಿಂದ ಅವು ಹೆಚ್ಚು ಅನುಕೂಲಕರ. ಹೆಚ್ಚು ಕಾಲ ಬಾಳಿಕೆ ಬರುವ ಕಾರಣ ಕಡಿಮೆ ಖರ್ಚು, ನಕಲು ಮಾಡೋದು ಸಹ ಕಷ್ಟವಾಗುತ್ತದೆ. ಹೀಗಾಗಿ, ದುಬಾರಿಯಾದ ಕೆಲವು ಭದ್ರತಾ ವೈಶಿಷ್ಟ್ಯಗಳನ್ನು ಅವು ಹೊಂದಿರಬಹುದು ಎಂದು ವರದಿ ಹೇಳಲಾಗಿದೆ.


